ಲಂಚ ಪ್ರಕರಣದಲ್ಲಿ ಶಾಸಕರು, ಸಂಸದರಿಗೆ ಕಾನೂನು ರಕ್ಷಣೆ ಇಲ್ಲ: 1998ರ ತೀರ್ಪು ರದ್ದುಪಡಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಲಂಚ ಪಡೆದ ಪ್ರಕರಣಗಳಲ್ಲಿ ಸಂಸದರು ಹಾಗೂ ಶಾಸಕರಿಗೆ ಕಾನೂನು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಶಾಸಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಹಿಂದಿನ ಆದೇಶವನ್ನು ಸೋಮವಾರ ರದ್ದುಪಡಿಸಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಲಂಚ ಪಡೆದ ಪ್ರಕರಣಗಳಲ್ಲಿ ಸಂಸದರು ಹಾಗೂ ಶಾಸಕರಿಗೆ ಕಾನೂನು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಶಾಸಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಹಿಂದಿನ ಆದೇಶವನ್ನು ಸೋಮವಾರ ರದ್ದುಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ಏಳು ಸದಸ್ಯರ ಸಂವಿಧಾನಿಕ ಪೀಠ ಇಂದು ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಎಂ.ಎಂ.ಸುಂದರೇಶ್, ಪಿ.ಎಸ್.ನರಸಿಂಹ, ಜೆ.ಬಿ.ಪರ್ಡಿವಾಲ, ಸಂಜಯ್ ಕುಮಾರ್ ಮತ್ತು ಮನೋಜ್ ಮಿಶ್ರಾ ಇದ್ದರು.

ಸಂಸತ್ ಸದಸ್ಯರು ಹಾಗೂ ರಾಜ್ಯಗಳ ವಿಧಾನ ಮಂಡಲದ ಸದಸ್ಯರು ಲಂಚ ಪಡೆದಾಗ, ಭ್ರಷ್ಟಾಚಾರ ಎಸಗಿದಾಗ ಅವರ ವಿರುದ್ಧ ತನಿಖೆ ನಡೆಯದಂತೆ ಕಾನೂನು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಜನಪ್ರತಿನಿಧಿಗಳಿಗೆ ಸುಪ್ರೀಂಕೋರ್ಟ್‌ ಶಾಕ್ ಕೊಟ್ಟಿದೆ.

ಸುಪ್ರೀಂಕೋರ್ಟ್
ಮರಣದಂಡನೆ ಜಾರಿಗೆ ನೇಣು ಬದಲು ಬೇರೆ ಮಾರ್ಗದ ಬಗ್ಗೆ ಚಿಂತನೆ ನಡೆಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್

ಅಕ್ಟೋಬರ್ 5, 2023 ರಂದು ತನ್ನ ತೀರ್ಪನ್ನು ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಂವಿಧಾನ ಪೀಠವು ಈ ವಿಷಯದ ಬಗ್ಗೆ ಇಂದು ತೀರ್ಪು ಪ್ರಕಟಿಸಿತು.

ಇಂದು ಸರ್ವಾನುಮತದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌, ಶಾಸನ ಸಭೆಯ ಸದಸ್ಯರು ಭ್ರಷ್ಟಾಚಾರ ನಡೆಸುವುದು ಅಥವಾ ಲಂಚ ಪಡೆಯುವುದು ಸಾರ್ವಜನಿಕ ಜೀವನದ ನೈತಿಕತೆಯನ್ನು ನಶಿಸುತ್ತದೆ ಎಂದು ಹೇಳಿದರು.

ಅಷ್ಟೇ ಅಲ್ಲದೆ, ಸಂಸತ್ತು ಅಥವಾ ಶಾಸಕಾಂಗದ ಕಾರ್ಯನಿರ್ವಹಣೆಗೆ ಸಂಬಂಧಿಸದ ಯಾವುದೇ ಸವಲತ್ತನ್ನು ನೀಡುವುದು, ನೆಲದ ಕಾನೂನಿನಿಂದ ಅನಿರ್ಬಂಧಿತ ವಿನಾಯಿತಿಗಳನ್ನು ಆನಂದಿಸುವ ವರ್ಗವನ್ನು ರಚಿಸಿದಂತಾಗುವುದು. ಭ್ರಷ್ಟಾಚಾರ ಮತ್ತು ಲಂಚಗುಳಿತನವ ಸಂವಿಧಾನದ ಆಶಯಗಳಿಗೆ ವಿನಾಶಕಾರಿಯಾಗಿವೆ ಎಂದು ತಿಳಿಸಿದರು.

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್ ಸಂವಿಧಾನದ ರಕ್ಷಕ: ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ

ಅಲ್ಲದೆ, ಈ ಹಿಂದೆ 1998ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ಇದೀಗ ಸುಪ್ರೀಂ ಕೋರ್ಟ್‌ ಸಪ್ತ ಸದಸ್ಯ ಪೀಠ ಬದಲಾವಣೆ ಮಾಡಿದೆ.

1998ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಅನ್ವಯ, ಸಂಸದರು ಹಾಗೂ ಶಾಸಕರು ಹಣ ಪಡೆದು ಭಾಷಣ ಮಾಡಿದ್ದರೆ ಅಥವಾ ಮತ ಹಾಕಿದ್ದರೆ ಅವರಿಗೆ ಲಂಚ ಪ್ರಕರಣದ ತನಿಖೆ ಅಡಿ ಕಾನೂನಿನ ರಕ್ಷಣೆ ಸಿಗುತ್ತಿತ್ತು. ಇದೀಗ ಸುಪ್ರೀಂ ಕೋರ್ಟ್‌ ನ್ಯಾಯ ಪೀಠ, ಶಾಸಕರು ಹಾಗೂ ಸಂಸದರಿಗೆ ಇದ್ದ ಆ ಸವಲತ್ತನ್ನು ರದ್ದು ಮಾಡಿದೆ.

ಸಂಸದೀಯ ಸೌಲಭ್ಯಗಳ ಅಡಿ ಲಂಚ ಸ್ವೀಕಾರವನ್ನು ಸೇರ್ಪಡೆ ಮಾಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಪೀಠ, 1998ರಲ್ಲಿ ನೀಡಿದ್ದ ತೀರ್ಪು ಸಂವಿಧಾನದ ಆರ್ಟಿಕಲ್ 105 ಹಾಗೂ 194ಕ್ಕೆ ವ್ಯತಿರಿಕ್ತ ನಿಲುವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ತೀರ್ಪು ಸ್ವಾಗತಿಸಿದ ಪ್ರಧಾನಿ ಮೋದಿ

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಾಗತಿಸಿದ್ದು, ತೀರ್ಪು ಶುದ್ಧ ರಾಜಕಾರಣವನ್ನು ಖಚಿತಪಡಿಸುತ್ತದೆ ಮತ್ತು ವ್ಯವಸ್ಥೆ ಮೇಲೆ ಜನರಿಗಿರುವ ನಂಬಿಕೆ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com