ನವದೆಹಲಿ: ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ ಪೋಸ್ಟರ್‌ಗಳು ಕೇಂದ್ರ ದೆಹಲಿಯ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಈ ಸಂಬಂಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಪೋಸ್ಟರ್‌ಗಳು 'ಮೋದಿ ಕಾ ಅಸಲಿ ಪರಿವಾರ್' (ಮೋದಿಯವರ ನಿಜವಾದ ಕುಟುಂಬ) ಎಂಬ ಶೀರ್ಷಿಕೆಯನ್ನು ಹೊಂದಿದ್ದು, ಕೆಳಭಾಗದಲ್ಲಿ 'ಭಾರತೀಯ ಯುವ ಕಾಂಗ್ರೆಸ್' ಎಂದು ಬರೆಯಲಾಗಿದೆ.
ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದೆಹಲಿ ಆಸ್ತಿ ವಿರೂಪಗೊಳಿಸುವಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ಸದ್ಯ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ನವದೆಹಲಿ ಮುನ್ಸಿಪಲ್ ಕೌನ್ಸಿಲ್‌ನ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಪೋಸ್ಟರ್‌ಗಳಲ್ಲಿ ಪ್ರಕಾಶಕರ ಹೆಸರು ಅಥವಾ ಅದನ್ನು ಹಾಕಿದ ವ್ಯಕ್ತಿಯ ಹೆಸರಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್‌ಜೆಡಿಯ ಲಾಲು ಪ್ರಸಾದ್ ಅವರ ಪ್ರಧಾನಿ ಮೋದಿಯವರಿಗೆ "ಕುಟುಂಬವಿಲ್ಲ" ಎಂಬ ಟೀಕೆಗೆ ಪ್ರತಿದಾಳಿ ನಡೆಸಿದ ಮೋದಿ ಸೋಮವಾರ 140 ಕೋಟಿ ಭಾರತೀಯರು ತಮ್ಮ "ಕುಟುಂಬ" ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ "ಮೋದಿ ಕಾ ಪರಿವಾರ್" ಅಭಿಯಾನವನ್ನು ಪ್ರಾರಂಭಿಸುವ ಮೂಲಕ ಬಿಜೆಪಿ ತನ್ನ ನಾಯಕನ ಬೆನ್ನೆಲುಬಾಗಿ ನಿಂತಿದೆ.
ಹಲವಾರು ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಬಯೋದಲ್ಲಿ "ಮೋದಿ ಕಾ ಪರಿವಾರ್" ಎಂದು ಸೇರಿಸಿರುವುದರಿಂದ, ಪರಾರಿಯಾದ ಉದ್ಯಮಿಗಳಾದ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಕೂಡ ಈ ಕುಟುಂಬದಲ್ಲಿದ್ದಾರೆಯೇ ಎಂದು ಕಾಂಗ್ರೆಸ್ ಮಂಗಳವಾರ ಪಕ್ಷವನ್ನು ಕೇಳಿದೆ.
Advertisement