
ಚೆನ್ನೈ: ಕೆಲವು ರಾಸಾಯನಿಕಗಳ ಪ್ರಯೋಗ ನಡೆಸುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ 17 ವರ್ಷದ 12 ನೇ ತರಗತಿ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಯು ಕೊಳತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದನು ಮತ್ತು ಶೈಕ್ಷಣಿಕ ಆಸಕ್ತಿಯಿಂದ ಈ ಪ್ರಯೋಗವನ್ನು ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಯೋಗ ನಡೆಸುತ್ತಿದ್ದ ವೇಳೆ ರಾಸಾಯನಿಕಗಳು ಸ್ಫೋಟಗೊಂಡಿದ್ದು, ಕೊಠಡಿಯು ಕುಸಿದಿದೆ. ಈ ವೇಳೆ ವಿದ್ಯಾರ್ಥಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾನೆ. ಘಟನೆ ನಂತರ, ಮೃತ ಬಳಸಿದ ರಾಸಾಯನಿಕಗಳನ್ನು ತಜ್ಞರು ಪರೀಕ್ಷಿಸುತ್ತಿದ್ದಾರೆ ಎಂದು ಗುರುವಾರ ತಡರಾತ್ರಿ ಪೊಲೀಸ್ ಪ್ರಕಟಣೆ ತಿಳಿಸಿದೆ.
ಸಂತ್ರಸ್ತ, ತನ್ನ ಸ್ವಂತ ಶೈಕ್ಷಣಿಕ ಆಸಕ್ತಿಯಿಂದ ಲಭ್ಯವಿರುವ ರಾಸಾಯನಿಕಳೊಂದಿಗೆ ತನ್ನ ನಿವಾಸದಲ್ಲಿ ಕೆಲವು ಪ್ರಯೋಗಗಳನ್ನು ನಡೆಸಿದಂತೆ ತೋರುತ್ತಿದೆ. ಸ್ಫೋಟದಿಂದ ಗಾಯಗೊಂಡು, ಆತನ ನಿವಾಸದ ಗೋಡೆ ಕುಸಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ಅದು ಹೇಳಿದೆ.
ರಾಸಾಯನಿಕಗಳು ಆಕಸ್ಮಿಕವಾಗಿ ಸ್ಫೋಟಗೊಂಡು ಈ ಘಟನೆ ಸಂಭವಿಸಿದೆ.
ಈ ಹಿನ್ನೆಲೆಯಲ್ಲಿ, ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಮತ್ತು ರಾಸಾಯನಿಕಗಳನ್ನು ವಿಶ್ಲೇಷಿಸುತ್ತಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದಿದೆ.
Advertisement