ಅಸ್ಸಾಂ: ISIS ಸೇರಲು ಹೊರಟಿದ್ದ ಐಐಟಿ ವಿದ್ಯಾರ್ಥಿಯನ್ನು ಬಂಧಿಸಿದ ಪೊಲೀಸರು

ಭಯೋತ್ಪಾದಕ ಸಂಘಟನೆಯಾದ ಐಸಿಸ್ ಸೇರಲು ಹೊರಟಿದ್ದ ಐಐಟಿ-ಗುವಾಹಟಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಸಂಜೆ ಗುವಾಹಟಿ ಸಮೀಪದ ಹಜೋ ಪ್ರದೇಶದಲ್ಲಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಗುವಾಹಟಿ: ಭಯೋತ್ಪಾದಕ ಸಂಘಟನೆಯಾದ ಐಸಿಸ್ ಸೇರಲು ಹೊರಟಿದ್ದ ಐಐಟಿ-ಗುವಾಹಟಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಸಂಜೆ ಗುವಾಹಟಿ ಸಮೀಪದ ಹಜೋ ಪ್ರದೇಶದಲ್ಲಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

ಬಾಂಗ್ಲಾದೇಶದಿಂದ ಭಾರತದ ಗಡಿಯೊಳಗೆ ಬಂದಿದ್ದ ಐಸಿಸ್ ಭಾರತದ ಮುಖ್ಯಸ್ಥ ಹ್ಯಾರಿಸ್ ಫಾರೂಕಿ ಅಲಿಯಾಸ್ ಹರೀಶ್ ಅಜ್ಮಲ್ ಫಾರೂಖಿ ಮತ್ತು ಆತನ ಸಹಚರ ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್ ಅವರನ್ನು ಧುಬ್ರಿ ಜಿಲ್ಲೆಯಲ್ಲಿ ಬಂಧಿಸಿದ ನಾಲ್ಕು ದಿನಗಳ ನಂತರ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

'ಐಐಟಿ ಗುವಾಹಟಿ ವಿದ್ಯಾರ್ಥಿ ಐಸಿಸ್‌ಗೆ ಸೇರಲು ಪ್ರತಿಜ್ಞೆ ಮಾಡಿದ್ದ ಮತ್ತು ಉಗ್ರ ಸಂಘಟನೆಗೆ ಸೇರಲೆಂದು ಪ್ರಯಾಣ ಮಾಡುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ. ಮುಂದಿನ ಕಾನೂನು ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ' ಎಂದು ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ಶನಿವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಟಿಎಫ್) ಕಲ್ಯಾಣ್ ಕುಮಾರ್ ಪಾಠಕ್, 'ಇಮೇಲ್ ಸ್ವೀಕರಿಸಿದ ನಂತರ, ನಾವು ವಿಷಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರಾರಂಭಿಸಿದ್ದೇವೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದೇವೆ. ವಿದ್ಯಾರ್ಥಿಯು ಇಮೇಲ್ ಕಳುಹಿಸಿದ್ದು, ಅದರಲ್ಲಿ ತಾನು ಐಸಿಸ್ ಸೇರುವ ಹಾದಿಯಲ್ಲಿರುವುದಾಗಿ ಹೇಳಿಕೊಂಡಿದ್ದಾನೆ' ಎಂದರು.

ಐಐಟಿ-ಗುವಾಹಟಿ ಅಧಿಕಾರಿಗಳನ್ನು ತಕ್ಷಣವೇ ಸಂಪರ್ಕಿಸಲಾಯಿತು. ವಿದ್ಯಾರ್ಥಿಯು ಮಧ್ಯಾಹ್ನದಿಂದ ಕಾಣೆಯಾಗಿದ್ದಾನೆ ಮತ್ತು ಆತನ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿದೆ ಎಂದು ನಮಗೆ ತಿಳಿಸಿದರು. ಆತ ನಾಲ್ಕನೇ ವರ್ಷದ ವಿದ್ಯಾರ್ಥಿ ಮತ್ತು ದೆಹಲಿಯ ಓಖ್ಲಾದ ಮೂಲದವನು ಎಂದು ಪಾಠಕ್ ಹೇಳಿದರು.

ಬಳಿಕ ಆತನ ಪತ್ತೆಗೆ ಹುಡುಕಾಟ ಆರಂಭಿಸಲಾಗಿದ್ದು, ಶನಿವಾರ ಸಂಜೆ ಗುವಾಹಟಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹಜೋ ಪ್ರದೇಶದಿಂದ ಸ್ಥಳೀಯರ ನೆರವಿನಿಂದ ಆತನನ್ನು ಬಂಧಿಸಲಾಗಿದೆ ಎಂದು ಎಎಸ್‌ಪಿ ತಿಳಿಸಿದ್ದಾರೆ.

ಪ್ರಾಥಮಿಕ ವಿಚಾರಣೆಯ ನಂತರ, ಆತನನ್ನು ಎಸ್‌ಟಿಎಫ್ ಕಚೇರಿಗೆ ಕರೆತರಲಾಗಿದೆ. ನಾವು ಇಮೇಲ್‌ನ ಉದ್ದೇಶವನ್ನು ಪರಿಶೀಲಿಸುತ್ತಿದ್ದೇವೆ. ಆತನ ಹಾಸ್ಟೆಲ್ ಕೋಣೆಯಲ್ಲಿ ಐಸಿಸ್ ಹೋಲುವ ಕಪ್ಪು ಬಾವುಟ ಕಂಡುಬಂದಿದೆ ಮತ್ತು ವಿಶೇಷ ಏಜೆನ್ಸಿಗಳಿಗೆ ಪರಿಶೀಲನೆಗಾಗಿ ಕಳುಹಿಸಲಾಗುತ್ತಿದೆ ಎಂದು ಪಾಠಕ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com