ಲೋಕಸಭಾ ಚುನಾವಣೆ: ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಬಿಜೆಪಿ
ತಿರುವನಂತಪುರಂ: ಕೇರಳದ ಉಳಿದ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಸುರೇಂದ್ರನ್ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಯನಾಡ್ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ.
ವಿದ್ವಾಂಸ ಮತ್ತು ಶ್ರೀಶಂಕರ ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಕೆಎಸ್ ರಾಧಾಕೃಷ್ಣನ್ ಮತ್ತು ನಟ-ರಾಜಕಾರಣಿ ಜಿ ಕೃಷ್ಣಕುಮಾರ್ ಅವರು ಕ್ರಮವಾಗಿ ಎರ್ನಾಕುಲಂ ಮತ್ತು ಕೊಲ್ಲಂ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಸರ್ಕಾರಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಟಿಎನ್ ಸರಸು ಅವರನ್ನು ಉತ್ತರ ಪಾಲಕ್ಕಾಡ್ ಜಿಲ್ಲೆಯ ಆಲತ್ತೂರಿನಿಂದ ಕಣಕ್ಕಿಳಿಸಲಾಗಿದೆ ಎಂದು ಪಕ್ಷ ಭಾನುವಾರ ಪ್ರಕಟಿಸಿದೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಪ್ರಾಬಲ್ಯವನ್ನು ಮುರಿಯಲು ಬಿಜೆಪಿ ಶ್ರಮಿಸುತ್ತಿದೆ. ಪಕ್ಷವು ಈ ಹಿಂದೆ 12 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿತ್ತು. ಅದರ ಮಿತ್ರ ಪಕ್ಷವಾದ ಬಿಡಿಜೆಎಸ್ ರಾಜ್ಯದ ನಾಲ್ಕು ಕ್ಷೇತ್ರಗಳಿಂದ ಸ್ಪರ್ಧಿಸಲಿದೆ.
ಕಾಂಗ್ರೆಸ್‌ನ ಸಾಂಪ್ರದಾಯಿಕ ಭದ್ರಕೋಟೆಯಾಗಿರುವ ವಯನಾಡಿನಲ್ಲಿ ಸುರೇಂದ್ರನ್ ಅವರ ಅನಿರೀಕ್ಷಿತ ಉಮೇದುವಾರಿಕೆಯೊಂದಿಗೆ, ರಾಹುಲ್ ಗಾಂಧಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ತನ್ನ ಎದುರಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಪ್ರಯತ್ನಿಸುತ್ತಿದೆ.
ಸಿಪಿಐನ ಅನ್ನಿ ರಾಜಾ ಈ ಕ್ಷೇತ್ರದಲ್ಲಿ ರಾಜ್ಯದ ಆಡಳಿತಾರೂಢ ಎಡಪಕ್ಷಗಳ ಅಭ್ಯರ್ಥಿಯಾಗಿದ್ದಾರೆ.
ವರ್ಷಗಳ ಹಿಂದೆ ಶಬರಿಮಲೆಗೆ ಯುವತಿಯರ ಪ್ರವೇಶದ ವಿರುದ್ಧ ಕೇಸರಿ ಪಕ್ಷದ ತೀವ್ರ ಆಂದೋಲನದ ಮುಖವಾದ ಸುರೇಂದ್ರನ್ ಅವರು 2020ರಿಂದ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುನ್ನುಮ್ಮೆಲ್ ಸುರೇಂದ್ರನ್ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಪತ್ತನಂತಿಟ್ಟದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಅದೇ ವರ್ಷ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿಯೂ ಕೊಣ್ಣಿಯಿಂದ ಸ್ಪರ್ಧಿಸಿ ಸೋಲೊಪ್ಪಿಕೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ