ಬಂಗಾಳದ ಮಹಿಳೆಯರ ಸ್ವಾಭಿಮಾನ-ಘನತೆಯೊಂದಿಗೆ ಆಟವಾಡಬೇಡಿ: PM ಮೋದಿಗೆ ಮಮತಾ ಎಚ್ಚರಿಕೆ
ಬೊಂಗಾವ್: ದೌರ್ಜನ್ಯಗಳ ಬಗ್ಗೆ ಸುಳ್ಳು ಹೇಳಿಕೆ ನೀಡುವ ಮೂಲಕ ರಾಜ್ಯದ ಮಹಿಳೆಯರ ಸ್ವಾಭಿಮಾನ ಮತ್ತು ಘನತೆಯೊಂದಿಗೆ ಆಟವಾಡಬೇಡಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದಾರೆ.
ಬೊಂಗಾವ್‌ನಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಮತಾ, ಪಶ್ಚಿಮ ಬಂಗಾಳದ ಪರಿಸ್ಥಿತಿ ಬಿಜೆಪಿ ಆಡಳಿತವಿರುವ ರಾಜ್ಯಗಳಂತಿಲ್ಲ ಎಂಬುದನ್ನು ಮೋದಿ ನೆನಪಿನಲ್ಲಿಟ್ಟುಕೊಳ್ಳಬೇಕು, ಮಹಿಳೆಯರ ಆತ್ಮಗೌರವದ ಜೊತೆ ಆಟವಾಡಬೇಡಿ, ನಮ್ಮ ತಾಯಂದಿರು ಮತ್ತು ಸಹೋದರಿಯರ ಗೌರವದೊಂದಿಗೆ ಆಟವಾಡುವ ಮೂಲಕ ಪಿತೂರಿ ನಡೆಸಬೇಡಿ ಎಂದು ಅವರು ಹೇಳಿದರು.
ಟಿಎಂಸಿ ನಾಯಕರು ಲೈಂಗಿಕ ದೌರ್ಜನ್ಯ ಮತ್ತು ಭೂಹಗರಣದ ಆರೋಪ ಹೊತ್ತಿರುವ ಸಂದೇಶಖಾಲಿಯಲ್ಲಿ ಟಿಎಂಸಿ ತನ್ನ ಹಿಂದಿನ ದುಷ್ಕೃತ್ಯಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಭಾನುವಾರ ತಮ್ಮ ಸಾರ್ವಜನಿಕ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಆದರೆ, ಇತ್ತೀಚಿಗೆ ಹೊರಬಿದ್ದಿರುವ ಉದ್ದೇಶಿತ ವೀಡಿಯೋವೊಂದರಲ್ಲಿ, ಇಡೀ ಷಡ್ಯಂತ್ರದ ಹಿಂದಿರುವ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯ ಆಜ್ಞೆಯ ಮೇರೆಗೆ ಮಹಿಳೆಯರ ಪ್ರತಿಭಟನೆಯನ್ನು ನಡೆಸಲಾಗಿದೆ ಎಂದು ಸಂದೇಶಖಾಲಿಯ ಬಿಜೆಪಿ ನಾಯಕರೊಬ್ಬರು ಹೇಳಿರುವುದಾಗಿ ತಿಳಿದು ಬಂದಿದೆ.
ಅಂತಹ ಮತ್ತೊಂದು ವೀಡಿಯೊದಲ್ಲಿ, ಈ ಹಿಂದೆ ಅತ್ಯಾಚಾರದ ದೂರುಗಳನ್ನು ದಾಖಲಿಸಿದ್ದ ಮಹಿಳೆಯರ ಒಂದು ವಿಭಾಗವು, ಬಿಜೆಪಿ ನಾಯಕರು ಖಾಲಿ ಕಾಗದಕ್ಕೆ ಸಹಿ ಹಾಕುವಂತೆ ಮಾಡಿದರು ಮತ್ತು ಪೊಲೀಸ್ ಠಾಣೆಗೆ ಹೋಗಲು ಒತ್ತಾಯಿಸಿದರು ಎಂದು ಆರೋಪಿಸಿದ್ದಾರೆ. ಪಿಟಿಐ ವಿಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿಲ್ಲ.
ನಮ್ಮ ಮಹಿಳೆಯರನ್ನು ಮುಟ್ಟಬೇಡಿ, ಇದು ನಿಮ್ಮ ಉತ್ತರ ಪ್ರದೇಶ, ಮಧ್ಯಪ್ರದೇಶ ಅಲ್ಲ. ಬಂಗಾಳದಲ್ಲಿ ಮಹಿಳೆಯರು ಗೌರವ ಮತ್ತು ಘನತೆಯಿಂದ ಬದುಕುತ್ತಾರೆ" ಎಂದು ಬ್ಯಾನರ್ಜಿ ಹೇಳಿದರು. ಮಹಿಳೆಯರಿಗಾಗಿ ರಾಜ್ಯದ ಆರ್ಥಿಕ ನೆರವು ನೀಡುವ 'ಲಕ್ಷ್ಮೀ ಭಂಡಾರ್' ಯೋಜನೆ ತಡೆಯಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ