
ಮುಂಬೈ: ಮಹಾರಾಷ್ಟ್ರ ಮಾದರಿಯಲ್ಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಉರುಳಿಸಲು Operation Nath ಯೋಜನೆ ಸಿದ್ದವಾಗುತ್ತಿದ್ದು, ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಹತ್ವದ ಸುಳಿವು ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ.
ಹೌದು.. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಪತನಕ್ಕೆ ನೆರೆಯ ಮಹಾರಾಷ್ಟ್ರದಲ್ಲಿ ತಂತ್ರಗಾರಿಕೆ ಹೆಣೆಯಲಾಗುತ್ತಿದೆ ಎಂಬ ಮಹಾ ಸುಳಿವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಿಟ್ಟುಕೊಟ್ಟಿದ್ದು, ರಾಜ್ಯದ ಬಿಜೆಪಿ ನಾಯಕರೇ ಸರ್ಕಾರ ಉರುಳಿಸಲು ನೆರವು ಕೋರಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಮಹಾರಾಷ್ಟ್ರದಲ್ಲಿ ನಡೆದ ಸಭೆಯೊಂದರಲ್ಲಿ ನಡೆದ ಚರ್ಚೆಯನ್ನು ಶಿಂಧೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಈ ಕುರಿತು ವಿಡಿಯೋ ಈಗ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ಸತಾರಾದಲ್ಲಿ ನಡೆದ ಒಂದು ಸಭೆಯಲ್ಲಿ ಕರ್ನಾಟಕ ಸರ್ಕಾರದ ಬಗ್ಗೆ ಅವರು ಮಾತನಾಡುತ್ತಾ, 'ಕರ್ನಾಟಕ ಸರ್ಕಾರ ಬೀಳುವುದು ಖಚಿತ. ಈ ಕುರಿತು ನನ್ನ ಅನುಭವ ಬೇಕು ಎಂದು ಶಿಂಧೆ ಹೇಳಿದ್ದಾರೆ.
ನಾನು ಇತ್ತೀಚೆಗೆ ಕರ್ನಾಟಕದ ಒಂದು ಸಭೆಗೆ ಹೋಗಿದ್ದೆ. ಕರ್ನಾಟಕದಲ್ಲಿಯೂ ʼಆಪರೇಶನ್ ನಾಥʼ ನಡೆಸುವುದಿದೆ. ಮಹಾರಾಷ್ಟ್ರದಲ್ಲಿ ಹಿಂದಿನ ಸರ್ಕಾರ ಪತನ ಮಾಡಿದಂತೆ ಇಲ್ಲಿಯೂ ಮಾಡುವುದಿದೆ. ಅದಕ್ಕೆ ನಿಮ್ಮ ಅನುಭವ ಅಗತ್ಯ ಎಂದು ನಾಯಕರು ಹೇಳಿದ್ದರು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ಸರ್ಕಾರ ಉರುಳಿಸುವುದು ಸುಲಭವೇನಲ್ಲ..
ಸದ್ಯ ಕಾಂಗ್ರೆಸ್ ವಿಧಾನಸಭೆಯಲ್ಲಿ 136 ಸ್ಥಾನ ಹೊಂದಿದ್ದು, ಪೂರ್ಣ ಬಹುಮತ ಹೊಂದಿದೆ. ಒಟ್ಟು 224 ಶಾಸಕ ಸ್ಥಾನಗಳಲ್ಲಿ ಬಿಜೆಪಿ ಕೇವಲ 66 ಸ್ಥಾನ ಹೊಂದಿದ್ದು, ಜೆಡಿಎಸ್ 19 ಶಾಸಕಬಲ ಹೊಂದಿದೆ. ಎರಡೂ ಪಕ್ಷಗಳು ಒಟ್ಟಾದರೂ 85 ಸ್ಥಾನಗಳು ಆಗುತ್ತವೆ; ಇದು ಬಹುಮತದ ಹತ್ತಿರಕ್ಕೂ ಬರುವುದಿಲ್ಲ. ಹೀಗಿರುವಾಗ ಕಾಂಗ್ರೆಸ್ ಸರ್ಕಾರ ಬೀಳಿಸುವುದು ಅಷ್ಟೊಂದು ಸುಲಭವಲ್ಲ.
ಮಹಾರಾಷ್ಟ್ರದಲ್ಲಿ ಏನಾಗಿತ್ತು?
ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ 2019ರ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಬಿಜೆಪಿ 105 ಸ್ಥಾನಗಳನ್ನು ಹಾಗೂ ಶಿವಸೇನೆ 56 ಸ್ಥಾನಗಳನ್ನು ಗೆದ್ದಿದ್ದವು. ಸರ್ಕಾರ ರಚನೆಯ ಸಂದರ್ಭದಲ್ಲಿ ಬಿರುಕು ಉಂಟಾಗಿತ್ತು. ಬಳಿಕ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಸೇರಿ ಸರ್ಕಾರ ರಚಿಸಿದ್ದವು.
ನಂತರ ಶಿವಸೇನೆ ನಾಯಕ ಏಕನಾಥ ಶಿಂಧೆ ಮೂರನೇ ಎರಡರಷ್ಟು ಶಾಸಕರ ಜೊತೆಗೆ ಹೊರಬಿದ್ದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು. ಇದರಿಂದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗಿ ಬಿಜೆಪಿ- ಶಿವಸೇನೆ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಎನ್‌ಸಿಪಿಯ ಅಜಿತ್ ಪವಾರ್ ಕೂಡ ಇದಕ್ಕೆ ಕೈ ಜೋಡಿಸಿದ್ದರು.
Advertisement