
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದೊಳಗಿನ ಸಿಸಿಟಿವಿ ದೃಶ್ಯಗಳ ವಿಡಿಯೋವನ್ನು ಆಮ್ ಆದ್ಮಿ ಪಕ್ಷ ಮರುಟ್ವೀಟ್ ಮಾಡಿದೆ. ಅದರಲ್ಲಿ ಆಪ್ ಸಂಸದೆ ಸ್ವಾತಿ ಮಲಿವಾಲ್ ಅವರು ತಮ್ಮನ್ನು ಮುಟ್ಟಿದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ವಿಡಿಯೋವನ್ನು ಮರುಟ್ವೀಟ್ ಮಾಡಿದ ಎಎಪಿ, "ಇದು ಸ್ವಾತಿ ಮಹಿವಾಲ್ ಅವರ ಸತ್ಯ(ಸ್ವಾತಿ ಮಲಿವಾಲ್ ಕಾ ಸಚ್)" ಎಂದು ಹೇಳಿದೆ.
ಇನ್ನು ಸ್ವಾತಿ ಮಲಿವಾಲ್ ಸಹ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, 'ರಾಜಕೀಯ ಹಿಟ್‌ಮ್ಯಾನ್' ತನ್ನನ್ನು ತಾನು ಉಳಿಸಿಕೊಳ್ಳಲು ಪ್ರಯತ್ನ ಪ್ರಾರಂಭಿಸಿದ್ದಾನೆ ಎಂದು ಶುಕ್ರವಾರ ಹೇಳಿದ್ದಾರೆ.
52 ಸೆಕೆಂಡುಗಳ ಈ ವಿಡಿಯೋದಲ್ಲಿ, ಮುಖ್ಯಮಂತ್ರಿ ನಿವಾಸದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಮಲಿವಾಲ್ ವಾಗ್ವಾದ ಮಾಡುತ್ತಿರುವುದು ಕಂಡುಬಂದಿದೆ.
ಸೋಮವಾರ ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಎಪಿ ರಾಜ್ಯಸಭಾ ಸದಸ್ಯೆ ಆರೋಪಿಸಿದ್ದರು.
"ಪ್ರತಿ ಬಾರಿಯಂತೆ, ಈ ಬಾರಿಯೂ ಈ ರಾಜಕೀಯ ಹಿಟ್‌ಮ್ಯಾನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾನೆ" ಎಂದು ಯಾರ ಹೆಸರನ್ನು ಉಲ್ಲೇಖಿಸದೆ ಸ್ವಾತಿ ಮಲಿವಾಲ್ ಎಕ್ಸ್‌ನಲ್ಲಿನ ಪೋಸ್ಟ್ ಮಾಡಿದ್ದಾರೆ.
"ತನ್ನ ಜನರ ಮೂಲಕ ಸರಿಯಾದ ವಿವರ ಇಲ್ಲದ ಈ ವಿಡಿಯೋವನ್ನು ಟ್ವೀಟ್ ಮಾಡಿ ತಪ್ಪು ಮಾಡಿಯೂ ತಾನು ಪಾರಾಗಬಹುದು ಎಂದು ಭಾವಿಸಿದ್ದಾನೆ. ಮನೆಯಲ್ಲಿ ಥಳಿಸುವ ವಿಡಿಯೋವನ್ನು ಯಾರಾದರೂ ಮಾಡುತ್ತಾರಾ? ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗಲೇ ಸತ್ಯಾಂಶ ಎಲ್ಲರಿಗೂ ತಿಳಿಯಲಿದೆ. ನೀವು ಯಾವ ಮಟ್ಟಕ್ಕೆ ಇಳಿಯುತ್ತಿದ್ದೀರಿ. ದೇವರು ಎಲ್ಲವನ್ನೂ ನೋಡುತ್ತಿದ್ದಾನೆ. ಮುಂದೊಂದು ದಿನ ಪ್ರತಿಯೊಬ್ಬರ ಸತ್ಯವೂ ಜಗತ್ತಿನ ಮುಂದೆ ಅನಾವರಣವಾಗಲಿದೆ' ಎಂದು ಮಲಿವಾಲ್ ಟ್ವೀಟ್ ಮಾಡಿದ್ದಾರೆ.
Advertisement