
ನವದೆಹಲಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರವನ್ನು ಧಂಸ ಮಾಡುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷೀದ್ ಕಿಡಿಕಾರಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಲ್ಮಾನ್ ಖುರ್ಷೀದ್, 'ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ನಿರ್ಮಿಸಲಾದ ರಾಮ ಮಂದಿರ ದೇವಾಲಯವನ್ನು ಇಡೀ ದೇಶವೇ ಒಪ್ಪಿಕೊಂಡಿದೆ.
ಮಂದಿರ ನಿರ್ಮಾಣದ ಶ್ರೇಯಸ್ಸು ಬಿಜೆಪಿ ಅಥವಾ ಮೋದಿ ಸರ್ಕಾರಕ್ಕಲ್ಲ, ಸುಪ್ರೀಂ ಕೋರ್ಟ್‌ಗೆ ಸಲ್ಲುತ್ತದೆ ಎಂಬುದನ್ನು ಪ್ರಧಾನಿ ನೆನಪಿಸಿಕೊಳ್ಳಬೇಕು. ದೇವರು ಎಲ್ಲರಿಗೂ ಸೇರಿದವನು, ಹಾಗೆಯೇ ಪೂಜಾ ಸ್ಥಳಗಳೂ ಸಹ. ಪ್ರಧಾನಿಯಾದವರು ಇಂತಹ ಭಾಷೆ ಮಾತನಾಡುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಅಂತೆಯೇ, 'ನಮ್ಮ ಪಕ್ಷ ಕಾನೂನು ಸುವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದು, ನಾವು ಯಾವುದೇ ಪೂಜಾ ಸ್ಥಳವನ್ನು ಬುಲ್ಡೋಜ್ ಮಾಡಲು ಅಥವಾ ಧ್ವಂಸ ಮಾಡಲು ಬಯಸುವುದಿಲ್ಲ. ದನಗಳ ಮಾಲೀಕರ ಎಮ್ಮೆಗಳನ್ನು ಕಸಿದುಕೊಳ್ಳುತ್ತೇವೆ ಮತ್ತು ಮಹಿಳೆಯರ ಮಂಗಳಸೂತ್ರವನ್ನು ದೋಚುತ್ತೇವೆ ಎಂದು ಮೋದಿ ಅವರು ಇತ್ತೀಚೆಗೆ ಮಾಡಿದ ಆರೋಪಗಳನ್ನು ಖುರ್ಷೀದ್ ಲೇವಡಿ ಮಾಡಿದ್ದು, 'ನಮ್ಮ ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಛಾಪನ್ನು ಹೊಂದಿದೆ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ. ಅಂತಹ ಹೋಲಿಕೆಯನ್ನು ಮಾಡಲು ಮುಸ್ಲಿಂ ಲೀಗ್‌ನ ಪ್ರಣಾಳಿಕೆಯನ್ನು ಅವರು ಯಾವಾಗ ಓದಿದರು ಎಂದು ನಮಗೆ ಹೇಳಬೇಕು ಎಂದರು.
"ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ಭಾವಿಸಲು ಪ್ರಾರಂಭಿಸಿದ್ದಾರೆ ಎಂಬುದಕ್ಕೆ ಪ್ರಧಾನಿ ಮತ್ತು ಇತರ ಹಿರಿಯ ಬಿಜೆಪಿ ನಾಯಕರ ಆರೋಪಗಳೇ ಪುರಾವೆ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ನಮಗಿದೆ, ಅಧಿಕಾರಕ್ಕೆ ಬಂದ ನಂತರ ಅಗ್ನಿವೀರ ಯೋಜನೆ ರದ್ದು ಪಡಿಸಿ, ಬಡವರಿಗೆ 10 ಕೆಜಿ ಉಚಿತ ಪಡಿತರ ನೀಡುವ ಭರವಸೆಗಳನ್ನು ಈಡೇರಿಸುತ್ತೇವೆ, ಬಿಜೆಪಿ ತನ್ನ ಐದು ಕೆಜಿ ಪಡಿತರ ಯೋಜನೆ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಯುಪಿಎ ಆಡಳಿತದಲ್ಲಿ ಅಂಗೀಕರಿಸಿದ ಆಹಾರದ ಹಕ್ಕು ಕಾಯಿದೆಗೆ ಶ್ರೇಯ ಸಲ್ಲುತ್ತದೆ" ಎಂದು ಖುರ್ಷಿದ್ ಹೇಳಿದರು.
ಜನಸಂಖ್ಯೆಯ ಒಂದು ವರ್ಗವನ್ನು "ಪಾಕಿಸ್ತಾನ ಬೆಂಬಲಿಗರು" ಎಂದು ಲೇಬಲ್ ಮಾಡುವ ಬಿಜೆಪಿ ನಾಯಕರ ಟೀಕೆಗಳನ್ನು ಟೀಕಿಸಿದ ಖುರ್ಷೀದ್, "ಅವರು ತಮ್ಮ ಭಾಷಣದಲ್ಲಿ ಅವರು ಆಗಾಗ್ಗೆ ಉಲ್ಲೇಖಿಸುವ ನೆರೆಯ ದೇಶಕ್ಕೆ ತಮ್ಮ ಮಕ್ಕಳನ್ನು ಕಳುಹಿಸಲಿ ಎಂದು ಕಿಡಿಕಾರಿದರು.
Advertisement