
ಪಾಟ್ನಾ: ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿಗಳಿಗೆ ‘ಮೋದಿಗೆ ಯಾರೂ ಮತ ಹಾಕಬೇಡಿ’ ಎಂದು ಹೇಳಿದ್ದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಆಮ್ರಕ್ ಎನ್ನುವ ಗ್ರಾಮದ ಹೈಸ್ಕೂಲ್‌ನಲ್ಲಿ ಹರೇಂದರ್ ರಜಾಕ್ ಎನ್ನುವರು ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ‘ಪಡಿತರ ಹೆಸರಿನಲ್ಲಿ ಜನರಿಗೆ ಕಳಪೆ ಆಹಾರ ಪದಾರ್ಥಗಳನ್ನು ಕಳುಹಿಸುವ ಮೋದಿಗೆ ಯಾರೂ ಮತ ಹಾಕಬೇಡಿ’ ಎಂದು ಹೇಳಿದ್ದರು. ಅಲ್ಲದೇ ಪದೇ ಪದೇ ಇದೇ ರೀತಿ ಅವರು ಹೇಳಿದ್ದರು ಎಂದು ದೂರು ನೀಡಲಾಗಿತ್ತು.
ಪೋಷಕರ ಲಿಖಿತ ದೂರಿನ ಅನ್ವಯ ಜಿಲ್ಲಾ ಶಿಕ್ಷಣಾಧಿಕಾರಿ ಅಜಯ್ ಕುಮಾರ್ ಸಿಂಗ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಅಡಿ ದೂರು ದಾಖಲಿಸಿಕೊಳ್ಳಲು ಪೊಲೀಸರಿಗೆ ತಿಳಿಸಿದ್ದರು. ಅದರ ಅನ್ವಯ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಹರೇಂದರ್ ರಜಾಕ್ ಅವರ ಮೇಲೆ ಕ್ರಮ ಜರುಗಿಸಿದ್ದಾರೆ. ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ ಎಂದು ಮುಜಾಫರ್‌ಪುರ ಎಎಸ್‌ಪಿ ರಾಕೇಶ್ ಕುಮಾರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ತರಗತಿಯ ಹಲವಾರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ರಜಾಕ್ ತರಗತಿಯೊಳಗೆ ಇಂತಹ ವಿಷಯಗಳನ್ನು ಹೇಳುತ್ತಿದ್ದರು. ಮೇಲ್ನೋಟಕ್ಕೆ ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಮಾತನಾಡುವ ಮೂಲಕ ಯಾವುದೇ ಸರ್ಕಾರಿ ನೌಕರರು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಅಗತ್ಯ ಕ್ರಮಕ್ಕಾಗಿ ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement