
ನವದೆಹಲಿ: ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಸಾವಿಗೀಡಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಡಾ. ಸೈಯದ್ ಇಬ್ರಾಹಿಂ ರೈಸಿ ಅವರ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವಲ್ಲಿ ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿದೆ. ಇಬ್ರಾಹಿಂ ರೈಸಿ ಅವರ ಕುಟುಂಬ ಮತ್ತು ಇರಾನ್ ಜನತೆಗೆ ಸಂತಾಪಗಳನ್ನು ಸೂಚಿಸುತ್ತೇನೆ. ಈ ದುಃಖದ ಸಮಯದಲ್ಲಿ ಭಾರತ ಇರಾನ್ ಜೊತೆ ನಿಲ್ಲಲಿದೆ ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪೋಸ್ಟ್ ಮಾಡಿ, ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಡಾ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹೆಚ್. ಅಮೀರ್-ಅಬ್ದುಲ್ಲಾಹಿಯಾನ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಅವರೊಂದಿಗೆ ನಡೆಸಿದ್ದ ಹಲವು ಸಭೆಗಳು ನೆನಪಿಗೆ ಬರುತ್ತಿವೆ. ಇತ್ತೀಚೆಗೆ ಜನವರಿ 2024 ರಲ್ಲಿಯೂ ಸಭೆಯಲ್ಲಿ ಭಾಗಿಯಾಗಿದ್ದೆವು. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಈ ದುರಂತದ ಸಮಯದಲ್ಲಿ ನಾವು ಇರಾನ್ ಜನರೊಂದಿಗೆ ನಿಲ್ಲುತ್ತೇವೆಂದು ತಿಳಿಸಿದ್ದಾರೆ.
ಅಜರ್‌ಬೈಜಾನ್‌ಗೆ ಅಣೆಕಟ್ಟೆ ಉದ್ಘಾಟನೆಗೆಂದು ಹೋಗಿದ್ದ ಇರಾನ್ ಅಧ್ಯಕ್ಷ ರೈಸಿ ಅವರು ವಿದೇಶಾಂಗ ಸಚಿವ, ತಮ್ಮ ಪ್ರತಿನಿಧಿ ಹಾಗೂ ಅಧಿಕಾರಿಯೊಬ್ಬರ ಸಮೇತ ತೆಹ್ರಾನ್‌ಗೆ 3 ಹೆಲಿಕಾಪ್ಟರ್ ತಂಡದೊಂದಿಗೆ ಮರಳುತ್ತಿದ್ದರು. 2 ಹೆಲಿಕಾಪ್ಟರ್ ಸುರಕ್ಷಿತವಾಗಿ ವಾಪಸು ಬಂದರೆ ಅಧ್ಯಕ್ಷ ಹಾಗೂ ವಿದೇಶಾಂಗ ಸಚಿವ ಇದ್ದ ಕಾಪ್ಟರ್ ಪತನಗೊಂಡಿತ್ತು.
ಇದೀಗ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ಅವರ ಜೊತೆಗಿದ್ದ ಇರಾನ್ ವಿದೇಶಾಂಗ ಸಚಿವ ಹುಸೈನ್ ಅಮಿರ್ ಅಬ್ದೊಲ್ಲಾಹಿಯನ್ ಹಾಗೂ ಕೆಲ ಅಧಿಕಾರಿಗಳು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.
ಆದರೆ, ಅಧ್ಯಕ್ಷರ ಸ್ಥಿತಿಗತಿ ಬಗ್ಗೆ ಗೊಂದಲ ಇರುವ ಕಾರಣ ಇರಾನ್ ಉಪಾಧ್ಯಕ್ಷಗೆ ಅಧ್ಯಕ್ಷ ಪಟ್ಟ ಕಟ್ಟುವ ಪ್ರಕ್ರಿಯೆಯೂ ನಡೆದಿದೆ ಎಂದು ಮೂಲಗಳು ಹೇಳಿವೆ.
ಏತನ್ಮಧ್ಯೆ ಶಾಂತಿ ಕಾಪಾಡಬೇಕು ಹಾಗೂ ವದಂತಿ ಹರಡಿಸಬಾರದು ಎಂದು ಇರಾನ್ ಪರಮೋಚ್ಚ ನಾಯಕ ಅಲಿ ಖಮೇನಿ ಮನವಿ ಮಾಡಿದ್ದಾರೆ
Advertisement