
ಕೋಲ್ಕತಾ: ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಮುಕ್ತಾಯವಾಗಿದ್ದು, ಈ ಹಂತದಲ್ಲಿ ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಮತದಾನವಾಗಿದೆ. ಅಚ್ಚರಿ ಎಂದರೆ ಇದೇ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸಹೋದರ ಮತದಾನದಿಂದ ವಂಚಿತರಾದಿಗಿದ್ದಾರೆ.
ಹೌದು.. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಕಿರಿಯ ಸಹೋದರ ಸ್ವಪನ್ ಬ್ಯಾನರ್ಜಿ ಮತದಾನದಿಂದ ವಂಚಿತರಾಗಿದ್ದು, ಮತದಾರರ ಪಟ್ಟಿಯಲ್ಲಿ ಅವರ ಹೆಸರು ನಾಪತ್ತೆಯಾಗಿರುವುದೇ ಕಾರಣ ಎಂದು ಹೇಳಲಾಗಿದೆ.
ಸ್ವಪನ್ ಬ್ಯಾನರ್ಜಿ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ಸೋಮವಾರ ಮತದಾನ ಮಾಡಲು ಸಾಧ್ಯವಾಗಲಿಲ್ಲ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೌರಾ ಪಟ್ಟಣದ ಮತದಾರರಾಗಿರುವ ಸ್ವಪನ್ ಬ್ಯಾನರ್ಜಿ ಅಥವಾ ಬಾಬುನ್ ಅವರು ಮತಗಟ್ಟೆಗೆ ಮತ ಚಲಾಯಿಸಲು ಹೋದಾಗ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿರುವುದು ಕಂಡುಬಂದಿದೆ. ಈ ಬಗ್ಗೆ ನಿರಾಶೆಯಿಂದಲೇ ಮಾತನಾಡಿರುವ ಸ್ವಪನ್ ಬ್ಯಾನರ್ಜಿ, 'ಇಂದು ಮತ ಹಾಕಲು ಹೋಗಿ ನನ್ನ ಹೆಸರು ಡಿಲೀಟ್ ಆಗಿರುವುದು ಕಂಡು ಬಂದಿದ್ದು, ಇಷ್ಟು ವರ್ಷದಿಂದ ಮತದಾನ ಮಾಡುತ್ತಿದ್ದೆ, ಈ ವರ್ಷ ಮತದಾನ ಮಾಡಲಾಗದೆ ನಿರಾಸೆಯಾಗಿದೆ. ಪ್ರಜಾಪ್ರಭುತ್ವ ದೇಶದ ಪ್ರಜೆಯಾಗಿ ನನಗೆ ಮತದಾನದ ಹಕ್ಕು ಇದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ವಕ್ತಾರ ಶಾಂತನು ಸೇನ್, "ಭಾರತೀಯ ಚುನಾವಣಾ ಆಯೋಗವು ಸಂಪೂರ್ಣ ವಿಷಯವನ್ನು ಪರಿಶೀಲಿಸುತ್ತಿದೆ. ಇದು ಏಕೆ ಸಂಭವಿಸಿತು ಎಂಬುದನ್ನು ಅದು ಮಾತ್ರ ವಿವರಿಸಬೇಕು ಎಂದು ಹೇಳಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಹೌರಾ ಲೋಕಸಭಾ ಸ್ಥಾನಕ್ಕೆ ಟಿಎಂಸಿ ಹಾಲಿ ಸಂಸದ ಪ್ರಸೂನ್ ಬ್ಯಾನರ್ಜಿ ಅವರನ್ನು ಮರುನಾಮಕರಣ ಮಾಡಿದ ನಂತರ ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸ್ವಪನ್ ಬ್ಯಾನರ್ಜಿ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಬಳಿಕ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಅವರಿಂದ ಅಂತರ ಕಾಯ್ದುಕೊಂಡಿದ್ದರು.
ಬಾಬುನ್ ಪ್ರಸ್ತುತ ಬೆಂಗಾಲ್ ಒಲಿಂಪಿಕ್ ಅಸೋಸಿಯೇಷನ್ ಮತ್ತು ಬೆಂಗಾಲ್ ಹಾಕಿ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದಾರೆ, ಜೊತೆಗೆ ಬೆಂಗಾಲ್ ಬಾಕ್ಸಿಂಗ್ ಅಸೋಸಿಯೇಷನ್‌ನ ಕಾರ್ಯದರ್ಶಿ ಮತ್ತು ತೃಣಮೂಲ ಕಾಂಗ್ರೆಸ್‌ನ ಕ್ರೀಡಾ ವಿಭಾಗದ ಉಸ್ತುವಾರಿಯೂ ಆಗಿದ್ದಾರೆ.
Advertisement