
ಉಮಾರಿಯಾ: ಮಧ್ಯಪ್ರದೇಶದ ಬಾಂಧವ್‌ಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಬಿಟಿಆರ್) ಇತ್ತೀಚೆಗೆ ಹತ್ತು ಆನೆಗಳು ಸಾವನ್ನಪ್ಪಿರುವ ಕುರಿತು ತನಿಖೆ ನಡೆಸಲು ಕೇಂದ್ರ ಪರಿಸರ ಸಚಿವಾಲಯ ತಂಡವನ್ನು ರಚಿಸಿದೆ. ಈ ವಾರದ ಆರಂಭದಲ್ಲಿ, ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹತ್ತು ಆನೆಗಳು ಸಾವನ್ನಪ್ಪಿದ್ದು ವಿಷವಿಕ್ಕಿ ಕೊಂದಿರುವ ಶಂಕೆ ಹೆಚ್ಚಿದೆ.
ಈ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಮಧ್ಯಪ್ರದೇಶ ಸರ್ಕಾರವು ಐವರು ಸದಸ್ಯರ ರಾಜ್ಯ ಮಟ್ಟದ ಸಮಿತಿಯನ್ನು ಕೂಡ ರಚಿಸಿದೆ ಎಂದು ಸಚಿವಾಲಯ ತಿಳಿಸಿದೆ. 'ಐದು ಸದಸ್ಯರ ಸಮಿತಿಯು ಎಪಿಸಿಸಿಎಫ್ (ವನ್ಯಜೀವಿ) ನೇತೃತ್ವದಲ್ಲಿ ನಡೆಯಲಿದೆ. ಸಮಿತಿಯು ನಾಗರಿಕ ಸಮಾಜ, ವಿಜ್ಞಾನಿಗಳು ಮತ್ತು ಪಶುವೈದ್ಯರನ್ನು ಒಳಗೊಂಡಿದೆ. ಈ ಪ್ರಕರಣವನ್ನು ರಾಜ್ಯ ಹುಲಿ ಸ್ಟ್ರೈಕ್ ಫೋರ್ಸ್ (ಎಸ್‌ಟಿಎಸ್‌ಎಫ್) ಮುಖ್ಯಸ್ಥರೂ ತನಿಖೆ ನಡೆಸುತ್ತಿದ್ದಾರೆ. ಎಸ್‌ಟಿಎಸ್‌ಎಫ್ ಅರಣ್ಯ ಮತ್ತು ಸಮೀಪದ ಗ್ರಾಮಗಳಲ್ಲಿ ಶೋಧ ನಡೆಸಿದ್ದು, ಘಟನೆಯ ಕುರಿತು ಕೂಲಂಕುಷ ತನಿಖೆ ನಡೆಸುತ್ತಿದೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಮಧ್ಯಪ್ರದೇಶದ ಮುಖ್ಯ ವನ್ಯಜೀವಿ ವಾರ್ಡನ್ ಅವರು ಬಾಂಧವಗಢದಲ್ಲಿ ಮೊಕ್ಕಾಂ ಹೂಡಿದ್ದು ಪ್ರಕರಣದ ತನಿಖೆ ಮತ್ತು ಕ್ರಮವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಹೆಚ್ಚುವರಿ ಅರಣ್ಯ ನಿರ್ದೇಶಕರು (ಪ್ರಾಜೆಕ್ಟ್ ಹುಲಿ ಮತ್ತು ಆನೆ) ಮತ್ತು ಸದಸ್ಯ ಕಾರ್ಯದರ್ಶಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, AIG NTCA, ನಾಗ್ಪುರ ಅವರು ಸಹ ಸೈಟ್‌ಗಳಿಗೆ ಭೇಟಿ ನೀಡಿದ್ದು ಆನೆಗಳ ಸಾವಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳು ಮತ್ತು ಸಂಭವನೀಯ ಕಾರಣಗಳ ಬಗ್ಗೆ ಚರ್ಚಿಸಿದ್ದಾರೆ.
ಅಕ್ಟೋಬರ್ 29ರಂದು ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಪಟೌರ್ ಮತ್ತು ಖಿಯಾತುಲಿ ವ್ಯಾಪ್ತಿಯ ಸಲ್ಖಾನಿಯಾದಲ್ಲಿ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ನಾಲ್ಕು ಆನೆಗಳ ಶವ ಪತ್ತೆ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಹುಡುಕಾಟದ ನಂತರ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಆರು ಆನೆಗಳು ಅಸ್ವಸ್ಥಗೊಂಡಿರುವುದು ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದವು. ಚಿಕಿತ್ಸೆ ವೇಳೆ ಅಸ್ವಸ್ಥಗೊಂಡ ಆನೆಗಳು ಇನ್ನೆರಡು ದಿನಗಳಲ್ಲಿ ಪ್ರಾಣ ಬಿಟ್ಟಿದ್ದವು. ಆ 10 ಸತ್ತ ಆನೆಗಳಲ್ಲಿ ಒಂದು ಗಂಡು ಮತ್ತು ಒಂಬತ್ತು ಹೆಣ್ಣು. 13 ಆನೆಗಳ ಹಿಂಡು ಅರಣ್ಯದ ಸುತ್ತ ಕೊಡೋ ರಾಗಿ ಬೆಳೆಯನ್ನು ನಾಶ ಮಾಡಿರುವ ಮಾಹಿತಿ ಬಹಿರಂಗವಾಗಿದೆ.
ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಶನಿವಾರ ಇಬ್ಬರು ಗ್ರಾಮಸ್ಥರನ್ನು ಕಾಡಾನೆಯೊಂದು ತುಳಿದು ಸಾಯಿಸಿದೆ. ಇಬ್ಬರೂ ಗ್ರಾಮಸ್ಥರ ಗುರುತು ಇನ್ನೂ ದೃಢಪಟ್ಟಿಲ್ಲ. ಇಬ್ಬರೂ ಮಲವಿಸರ್ಜನೆಗೆಂದು ಕಾಡಿಗೆ ಹೋಗಿದ್ದರು. ಅಕ್ಟೋಬರ್ 29 ಮತ್ತು 31ರ ನಡುವೆ ಮೂರು ದಿನಗಳಲ್ಲಿ 13 ಹಿಂಡಿನ 10 ಕಾಡು ಆನೆಗಳು ಸಾವನ್ನಪ್ಪಿದ ಪ್ರದೇಶದಿಂದ ಸುಮಾರು 25 ಕಿ.ಮೀ ದೂರದಲ್ಲಿ ಘಟನೆ ಸಂಭವಿಸಿದ ಕಾರಣ ಈ ಘಟನೆಯನ್ನು ಪ್ರತೀಕಾರವೆಂದು ಪರಿಗಣಿಸಲಾಗಿದೆ. ಗ್ರಾಮಸ್ಥರ ಸಾವಿಗೆ ಇದೇ ಹಿಂಡು ಕಾರಣ ಎಂಬುದು ಅಧಿಕಾರಿಗಳ ಅಭಿಪ್ರಾಯ. ಶಿಲೀಂಧ್ರ-ಸೋಂಕಿತ ಕೊಡೋ ಧಾನ್ಯಗಳಿಂದ ಉತ್ಪತ್ತಿಯಾಗುವ ಶಂಕಿತ ವಿಷವು 10 ಆನೆಗಳ ದುರಂತ ಸಾವಿಗೆ ಕಾರಣವೆಂದು ಗುರುತಿಸಲಾಗಿದೆ.
Advertisement