ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಉಪಟಳ ಉಲ್ಬಣಗೊಂಡಿದ್ದು, ಈ ನಡುವಲ್ಲೇ ಭಯೋತ್ಪಾದಕರಿಗೆ ಆಶ್ರಯ ನೀಡುವವರಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆಸ ಸಮಾರಂಭದಲ್ಲಿ ಮಾತನಾಡಿದ ಅವರು, ಅಮಾಯಕರಿಗೆ ಹಾನಿಗಳಾಗದಂತೆ ಎಚ್ಚರಿಕೆ ವಹಿಸುವಂತೆ ಭದ್ರತಾ ಪಡೆಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಭಯೋತ್ಪಾದಕರಿಗೆ ಆಶ್ರಯ ನೀಡುವ ಮನೆಗಳನ್ನು ನೆಲಸಮಗೊಳಿಸಲಾಗುವುದು ಎಂದು ಕಠಿಣ ಎಚ್ಚರಿಗೆ ನೀಡಿದರು.
ಭಯೋತ್ಪಾದಕರಿಗೆ ಆಶ್ರಯ ನೀಡುವವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಕೆಲವರು ಹೇಳಿಕೆ ನೀಡುತ್ತಿದ್ದಾರೆ. ಇದು ದೌರ್ಜನ್ಯವಲ್ಲ. ಇದು ನ್ಯಾಯ ಒದಗಿಸುತ್ತಿರುವುದು ಎಂದು ನಾನು ನಂಬುತ್ತೇನೆ, ಈ ಕ್ರಮ ಭವಿಷ್ಯದಲ್ಲಿಯೂ ಮುಂದುವರೆಯುತ್ತದೆ ಎಂದು ತಿಳಿಸಿದರು. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ್ನು ಶೀಘ್ರದಲ್ಲೇ ಮರುಸ್ಥಾಪಿಸಲಾಗುವುದು ಎಂದೂ ಹೇಳಿದರು.
ಈಗಾಗಲೇ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಭರವಸೆ ನೀಡಿದ್ದಾರೆ. ಸಂಸತ್ತಿನಲ್ಲಿ ಯಾವುದೇ ಹೇಳಿಕೆ ನೀಡಿದ್ದರೂ ಅದಕ್ಕೆ ಸರ್ಕಾರ ಒಪ್ಪಿಕೊಳ್ಳಬೇಕು. ಸಂಸತ್ತಿನ ಅಧಿವೇಶನದಲ್ಲಿ ಸರ್ಕಾರ ನೀಡುವ ಆಶ್ವಾಸನೆ ಪೂರ್ವದಿಂದ ಸೂರ್ಯ ಉದಯಿಸುವುದೆಷ್ಟು ಸತ್ಯವೋ ಅಷ್ಟೇ ಸತ್ಯವಾಗಿರುತ್ತದೆ ಎಂದರು.
ಏತನ್ಮಧ್ಯೆ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ವಿಧಾನಸಭೆಯಲ್ಲಿ ಸಂತಾಪ ಸೂಚಿಸುವ ಸಂದರ್ಭದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಕಾಶ್ಮೀರದ ಬಗ್ಗೆ ಹೊಂದಿದ್ದ ದೃಷ್ಟಿಕೋನವನ್ನು ಶ್ಲಾಘಿಸಿದರು.
ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸುಧಾರಿಸಲು ವಾಜಪೇಯಿ ಅವರ ಪ್ರಯತ್ನಗಳನ್ನು ಇದೇ ವೇಳೆ ಅವರು ಸ್ಮರಿಸಿದರು. ಲಾಹೋರ್ ನಲ್ಲಿ ವಾಜಪೇಯಿ ಬಸ್ ಪ್ರವಾಸ ಮತ್ತು ಮಿನಾರ್-ಎ-ಪಾಕಿಸ್ತಾನಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದರು.
ಈ ನಡುವೆ ಬಂಡಿಪೋರಾದಲ್ಲಿ ಸೇನಾಪಡೆ ನಡೆಸಿದ ಎನ್ಕೌಂಟರ್ ನಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ಇಬ್ಬರು ಭಯೋತ್ಪಾಕರನ್ನು ಬಂಧನಕ್ಕೊಳಪಡಿಸಲಿದ್ದಾರೆ.
ಕೈತ್ಸಾನ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಚಲನವಲನಗಳ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸೇನಾಪಡೆ, ಪೊಲೀಸರು ಹಾಗೂ ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
Advertisement