ನವದೆಹಲಿ: ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿನ ರಾಜಕೀಯ ನಾಯಕರು ಮಹಿಳೆಯರ ವಿರುದ್ಧ ನೀಡುತ್ತಿರುವ ಅವಹೇಳನಕಾರಿ ಹೇಳಿಕೆಗಳ ವಿತಾರವನ್ನು ಗಂಭೀರವಾಗಿವಾಗಿ ಪರಿಗಣಿಸಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜೀವ್ ಕುಮಾರ್ ಅವರು, ಮಹಿಳೆಯರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವ ಯಾವುದೇ ಕಾಮೆಂಟ್‌ಗಳನ್ನು ತಪ್ಪಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಪಕ್ಷಗಳ ನಾಯಕರು ಅಥವಾ ಕಾರ್ಯಕರ್ತರ ವೈಯಕ್ತಿಕ ಜೀವನದ ಯಾವುದೇ ಅಂಶವನ್ನು ಟೀಕಿಸಬಾರದು ಎಂದು ಅವರು ಹೇಳಿದರು.
ಚುನಾವಣಾ ಪ್ರಚಾರದ ವೇಳೆ ಮಹಿಳೆಯರ ವಿರುದ್ಧ ನಾಯಕರು ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಖಂಡಿಸಿದ್ದು, ಇಂತಹ ಹೇಳಿಕೆಗಳ ವಿರುದ್ಧ ಸಕಾಲದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದರು.
ಮಹಿಳೆಯ ಗೌರವ ಮತ್ತು ಘನತೆಯ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ ಬಗ್ಗೆ ಪರಿಶೀಲನಾ ಸಭೆಯಲ್ಲಿ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಪೊಲೀಸ್ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಚುನಾವಣಾಧಿಕಾರಿ ಉಪಸ್ಥಿತರಿದ್ದರು ಎನ್ನಲಾಗಿದೆ.
ವೈಯಕ್ತಿಕ ಜೀವನದ ಯಾವುದೇ ಅಂಶವನ್ನು ಟೀಕಿಸಬೇಡಿ
ಮಹಿಳೆಯರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವ ಯಾವುದೇ ಕಾಮೆಂಟ್‌ಗಳನ್ನು ಮಾಡದಂತೆ ಸಿಇಸಿ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಮನವಿ ಮಾಡಿದ್ದಾರೆ. ಇತರ ಪಕ್ಷಗಳ ನಾಯಕರು ಅಥವಾ ಕಾರ್ಯಕರ್ತರ ವೈಯಕ್ತಿಕ ಜೀವನದ ಯಾವುದೇ ಅಂಶವನ್ನು ಟೀಕಿಸಬಾರದು ಎಂದು ಅವರು ಸ್ಪಷ್ಟಪಡಿಸಿದರು. ಎದುರಾಳಿಗಳನ್ನು ಅವಮಾನಿಸುವ ಕೀಳು ಮಟ್ಟದ ವೈಯಕ್ತಿಕ ದಾಳಿ ಮಾಡಬಾರದು ಎಂದು ಅವರು ಹೇಳಿದರು.
'ಚುನಾವಣಾ ನೀತಿ ಸಂಹಿತೆ ಅನ್ವಯ ಕಠಿಣ ಕ್ರಮ'
ಅಂತೆಯೇ ಮಹಿಳೆಯರ ಗೌರವ ಮತ್ತು ಘನತೆಗೆ ವಿರುದ್ಧವಾಗಿ ಅಭ್ಯರ್ಥಿಗಳು ಅಥವಾ ರಾಜಕಾರಣಿಗಳು ಯಾವುದೇ ಪ್ರಚೋದನಾತ್ಮಕ ಹೇಳಿಕೆ ನೀಡಿದರೆ ಚುನಾವಣಾ ನೀತಿ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜೀವ್ ಕುಮಾರ್ ಹೇಳಿದರು. ಎಲ್ಲಾ ಅಭ್ಯರ್ಥಿಗಳು ಮತ್ತು ಪಕ್ಷದ ನಾಯಕರು ತಮ್ಮ ಭಾಷಣಗಳಲ್ಲಿ ಮತ್ತು ಸಾರ್ವಜನಿಕ ಸಂವಾದಗಳಲ್ಲಿ ಮಹಿಳೆಯರಿಗೆ ಗೌರವವನ್ನು ತೋರಿಸುವ ಮೂಲಕ ತಮ್ಮ ನಡವಳಿಕೆಯನ್ನು ಸುಧಾರಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ (ಯುಬಿಟಿ) ಸಂಸದ ಅರವಿಂದ್ ಸಾವಂತ್, ಶಿವಸೇನಾ ಶಿಂಧೆ ಬಣದ ನಾಯಕಿ ಶೈನಾ ಎನ್‌ಸಿ ಅವರನ್ನು "ಆಮದು ಮಾಡಿದ ಮಾಲ್" ಎಂದು ಟೀಕಿಸಿದ್ದರು. ಸಾವಂತ್ ಹೇಳಿರುವುದಾಗಿ ವರದಿಯಾಗಿದೆ, “ಅವಳ ಸ್ಥಿತಿಯನ್ನು ನೋಡಿ. ಜೀವನದುದ್ದಕ್ಕೂ ಬಿಜೆಪಿಯಲ್ಲಿದ್ದ ಆಕೆ ಈಗ ಬೇರೆ ಪಕ್ಷಕ್ಕೆ ಹೋಗಿದ್ದಾಳೆ. ಅದು ಆಮದು ಮಾಡಿದ 'ಮಾಲ್' ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿ ಹಲವು ನಾಯಕರು ಅವರ ಹೇಳಿಕೆಯನ್ನು ಟೀಕಿಸಿದ್ದರು.
ಬಳಿಕ ಎಚ್ಚೆತ್ತಿದ್ದ ಸಾವಂತ್, 'ತಾನು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಹೊರಗಿನವರು ಇಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ನಾನು ಹೇಳಿದ್ದೆ. ಗಲಾಟೆ ಸೃಷ್ಟಿಸುವುದು ಅವರ ಅಭ್ಯಾಸ,’’ ಎಂದು ಹೇಳಿದ್ದಾರೆ.
Advertisement