ನವದೆಹಲಿ: ಉತ್ತರ ಪ್ರದೇಶದ ದಿಯೋಬಂದ್ ನಲ್ಲಿರುವ ಇಸ್ಲಾಮಿಕ್ ಸೆಮಿನರಿ ದಾರುಲ್ ಉಲೂಮ್‌ನಲ್ಲಿ ಮಹಿಳೆಯರ ಪ್ರವೇಶದ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ. ಈಗ ಅವರು ಕೆಲವು ನಿಯಮಗಳಿಗೆ ಒಳಪಟ್ಟು ಕ್ಯಾಂಪಸ್‌ಗೆ ಪ್ರವೇಶಿಸು ಎಂದು ಸಂಸ್ಥೆ ತಿಳಿಸಿದೆ.
ಶುಕ್ರವಾರದಿಂದ ಜಾರಿಗೆ ಬಂದ ನಿಯಮಗಳ ಪ್ರಕಾರ ಮಹಿಳೆಯರು ಕ್ಯಾಂಪಸ್ ಪ್ರವೇಶಿಸುವುದಕ್ಕೂ ಮುನ್ನ ಹಿಜಾಬ್ ಧರಿಸಬೇಕು ಮತ್ತು ಕ್ಯಾಂಪಸ್‌ಗೆ ಪ್ರವೇಶಿಸಲು ಕುಟುಂಬದ ಸದಸ್ಯರೊಂದಿಗೆ ಹೋದರೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತದೆ.
ಈ ವರ್ಷದ ಆರಂಭದಲ್ಲಿ ಕ್ಯಾಂಪಸ್‌ನೊಳಗೆ "ರೀಲ್‌ಗಳನ್ನು" ಚಿತ್ರೀಕರಿಸಲಾಗಿದೆ ಎಂಬ ದೂರಿನ ಮೇರೆಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಿದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯ ಆಡಳಿತ, ವೀಡಿಯೊಗ್ರಫಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಮತ್ತು ಸಂದರ್ಶಕರು ಪ್ರವೇಶಿಸುವ ಮೊದಲು ತಮ್ಮ ಫೋನ್‌ಗಳನ್ನು ಗೇಟ್‌ನಲ್ಲಿ ಇಡಬೇಕು ಎಂದು ಹೇಳಿದೆ.
ದಾರುಲ್ ಉಲೂಮ್‌ನ ಮಾಧ್ಯಮ ಉಸ್ತುವಾರಿ ಅಶ್ರಫ್ ಉಸ್ಮಾನಿ ಮಾತನಾಡಿ, ಹಲವು ಸುತ್ತಿನ ಮಾತುಕತೆಯ ನಂತರ ಮ್ಯಾನೇಜ್‌ಮೆಂಟ್ ಜಗತ್ತಿನಾದ್ಯಂತ ಬರುವ ಮಹಿಳೆಯರ ಪ್ರವೇಶಕ್ಕೆ ನಿಯಮಗಳನ್ನು ಪ್ರಕಟಿಸಿರುವುದಾಗಿ ತಿಳಿಸಿದ್ದಾರೆ.
ನಿಯಮಗಳನ್ನು ಪಾಲಿಸುವ ಮಹಿಳೆಯರು ದಾರುಲ್ ಉಲೂಮ್ ಕ್ಯಾಂಪಸ್‌ಗೆ ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ದಾರುಲ್ ಉಲೂಮ್ ಆಡಳಿತ ಸಂದರ್ಶಕರ ಪಾಸ್‌ಗಳನ್ನು ನೀಡಲು ಅಧಿಕಾರಿಯನ್ನು ನೇಮಿಸಿದೆ, ಇದು ಕ್ಯಾಂಪಸ್‌ಗೆ ಪ್ರವೇಶಿಸಲು ಪುರುಷರು ಮತ್ತು ಮಹಿಳೆಯರಿಗೆ ಅನ್ವಯಿಸುತ್ತದೆ ಎಂದು ಉಸ್ಮಾನಿ ತಿಳಿಸಿದ್ದಾರೆ.
ವಿಸಿಟರ್ ಪಾಸ್‌ಗಾಗಿ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಅಥವಾ ಪ್ಯಾನ್ ಕಾರ್ಡ್ ನ್ನು ಸಂಬಂಧಪಟ್ಟ ಅಧಿಕಾರಿಗೆ ತೋರಿಸಬೇಕಾಗುತ್ತದೆ. ಸಂದರ್ಶಕರ ಹೆಸರುಗಳು, ಮೊಬೈಲ್ ಸಂಖ್ಯೆಗಳು, ವಿಳಾಸಗಳು, ಪ್ರವೇಶ ಬಯಸುವ ಪುರುಷರು ಮತ್ತು ಮಹಿಳೆಯರ ಸಂಖ್ಯೆಗಳನ್ನು ಸಹ ದಾಖಲಿಸಲಾಗುವುದು ಎಂದು ಅವರು ಹೇಳಿದರು.
ಮಹಿಳೆಯರು ಹಿಜಾಬ್ ಧರಿಸಬೇಕು ಮತ್ತು ಸೂರ್ಯಾಸ್ತದವರೆಗೆ ಸಂಸ್ಥೆಯನ್ನು ಪ್ರವೇಶಿಸಲು ಅನುಮತಿಸಲಾಗುತ್ತದೆ. ಮದರಸಾಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವ್ಯಕ್ತಿಯ ಮೊಬೈಲ್ ಫೋನ್‌ಗಳನ್ನು ಮುಖ್ಯ ಗೇಟ್‌ನಲ್ಲಿ ಇಡಬೇಕಾಗುತ್ತದೆ. ಹೊರಡುವಾಗ ಅದನ್ನು ಅವರಿಗೆ ಹಿಂತಿರುಗಿಸಲಾಗುತ್ತದೆ ಎಂದು ಉಸ್ಮಾನಿ ಹೇಳಿದ್ದಾರೆ. ಮುಸುಕು ರಹಿತ ಮಹಿಳೆಯರು ಸಂಸ್ಥೆಯ ಕಟ್ಟಡಗಳ ಫೋಟೋ ಮತ್ತು ವೀಡಿಯೊಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂಬ ದೂರಿನ ಮೇರೆಗೆ ಮೇ 17 ರಂದು ದಾರುಲ್ ಉಲೂಮ್ ನಿರ್ವಹಣಾ ವ್ಯವಸ್ಥೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಿತು.
Advertisement