ಶ್ರೀನಗರ: ತಾನು ಪ್ರಧಾನಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗುಜರಾತ್‌ನ ಕಿರಣ್ ಪಟೇಲ್ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ.
ನ್ಯಾಯಾಲಯವು ಪ್ರಾಸಿಕ್ಯೂಷನ್ ದೂರನ್ನು ಪರಿಗಣನೆಗೆ ತೆಗೆದುಕೊಂಡಿದ್ದು, ಆರೋಪಿಗೆ ನವೆಂಬರ್ 27 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ ಎಂದು ಶನಿವಾರ ಇಡಿ ತಿಳಿಸಿದೆ.
ಈ ಪ್ರಕರಣ ಸಂಬಂಧ ಬಂಧಿತರಾಗಿದ್ದ ಅಹಮದಾಬಾದ್ ನಿವಾಸಿ ಕಿರಣ್ ಪಟೇಲ್ ಅವರಿಗೆ ಕಳೆದ ವರ್ಷ ಆಗಸ್ಟ್ 29 ರಂದು ಇಲ್ಲಿನ ನ್ಯಾಯಾಲಯವು ಜಾಮೀನು ನೀಡಿತ್ತು. ಮಾರ್ಚ್‌ನಲ್ಲಿ ಜನರನ್ನು ವಂಚಿಸಲು ಮತ್ತು ಆಡಳಿತದಿಂದ ಅನಗತ್ಯ ಪ್ರಯೋಜನಗಳನ್ನು ಪಡೆಯಲು ತಾನು ಪ್ರಧಾನಿ ಕಚೇರಿಯಲ್ಲಿ(ಪಿಎಂಒ) ಉನ್ನತ ಅಧಿಕಾರಿ ಎಂದು ಹೇಳಿಕೊಂಡಿದ್ದರು.
ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪಟೇಲ್ ಮತ್ತು ಇತರರ ವಿರುದ್ಧ ಶ್ರೀನಗರದ ನಿಶಾತ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿತ್ತು.
"ಪಟೇಲ್, ಒಬ್ಬ ವಂಚಕ. ತಾನು ಪ್ರಧಾನಿ ಕಚೇರಿಯ ಹೆಚ್ಚುವರಿ ನಿರ್ದೇಶಕ ಎಂದು ಸುಳ್ಳು ಹೇಳಿದ್ದಾನೆ ಮತ್ತು ಜನರನ್ನು ವಂಚಿಸಲು ಮತ್ತು ಸರ್ಕಾರಿ ಸೌಲಭ್ಯ, ಭದ್ರತೆ ಪಡೆಯಲು ನಕಲಿ ವಿಸಿಟಿಂಗ್ ಕಾರ್ಡ್‌ಗಳನ್ನು ಮೋಸದಿಂದ ಸೃಷ್ಟಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
Advertisement