ಕಾನ್ಪುರ: ವೈದ್ಯಕೀಯ ಪ್ರವೇಶ ಪರೀಕ್ಷೆ NEET (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಮೇಲೆ ಇಬ್ಬರು ಕೋಚಿಂಗ್ ಸೆಂಟರ್ ಶಿಕ್ಷಕರೇ ಅತ್ಯಾಚಾರ ವೆಸಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವರದಿಯಾಗಿದೆ.
ಕಾನ್ಪುರದ 2 ಪ್ರಖ್ಯಾತ ಕೋಚಿಂಗ್ ಸೆಂಟರ್ ಗಳ ಇಬ್ಬರು ಶಿಕ್ಷಕರನ್ನು ಇದೀಗ ಪೊಲೀಸರು ಬಂಧಿಸಿದ್ದು ಅವರ ವಿರುದ್ಧ ಅತ್ಯಾಚಾರ ಮತ್ತು ಬ್ಲಾಕ್ ಮೇಲ್ ಪ್ರಕರಣ ದಾಖಲಿಸಿದ್ದಾರೆ.
ಮೂಲಗಳ ಪ್ರಕಾರ, 2022 ರಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸಲು ವಿದ್ಯಾರ್ಥಿ ಕಾನ್ಪುರಕ್ಕೆ ಹೋಗಿದ್ದ ಮತ್ತು ಅಲ್ಲಿನ ಕೋಚಿಂಗ್ ಸೆಂಟರ್‌ಗೆ ದಾಖಲಾಗಿದ್ದ ವಿದ್ಯಾರ್ಥಿನಿ ಮೇಲೆ ಇಬ್ಬರು ಶಿಕ್ಷಕರು ಅತ್ಯಾಚಾರ ವೆಸಗಿದ್ದರು. ಈ ವರ್ಷದ ಜನವರಿಯಲ್ಲಿ, ಸಂತ್ರಸ್ಥೆಯ ಜೀವಶಾಸ್ತ್ರದ ಶಿಕ್ಷಕ ಸಾಹಿಲ್ ಸಿದ್ದಿಕಿ, (32 ವರ್ಷ), ತನ್ನ ಮನೆಯಲ್ಲಿ ನಡೆದ ಪಾರ್ಟಿಗೆ ಅವಳನ್ನು ಆಹ್ವಾನಿಸಿದ್ದ. ಆ ಪಾರ್ಟಿಗೆ ಕೋಚಿಂಗ್ ಸೆಂಟರ್ ನ ಎಲ್ಲಾ ವಿದ್ಯಾರ್ಥಿಗಳು ಬರುತ್ತಾರೆ ಎಂದು ಆಕೆಯನ್ನು ಪುಸಲಾಯಿಸಿದ್ದ. ಆತನ ಮಾತು ನಂಬಿದ್ದ ವಿದ್ಯಾರ್ಥಿನಿ ಆತನ ಮನೆಗೆ ಹೋಗಿದ್ದಳು.
ಮನೆಗೆ ಹೋಗಿದಾಗಲೇ ಆಕೆ ಒಬ್ಬಳು ಮಾತ್ರ ಬಂದಿದ್ದೇನೆ ಎಂದು ತಿಳಿದಿದೆ. ಈ ವೇಳೆ ಆಕೆಯನ್ನು ಮನೆಗೆ ಆಹ್ವಾನಿಸಿದ್ದ ಶಿಕ್ಷಕ ಸಿದ್ದಿಕಿ ಕಂಠ ಪೂರ್ತಿ ಕುಡಿದಿದ್ದ. ಆಕೆ ಮನೆಗೆ ಬಂದ ಬಳಿಕ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಅಲ್ಲದೆ ತನ್ನ ಕೃತ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಈ ವಿಚಾರವನ್ನು ಬಹಿರಂಗ ಮಾಡಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಮತ್ತು ಆಕೆಯ ಇಡೀ ಕುಟುಂಬವನ್ನು ಕೊಲ್ಲುವ ಕುರಿತು ಬೆದರಿಕೆ ಹಾಕಿದ್ದ ಎಂದು ಸಂತ್ರಸ್ಥೆ ಹೇಳಿದ್ದಾಳೆ ಎನ್ನಲಾಗಿದೆ.
ಇದಾದ ಬಳಿಕ ಇದೇ ವಿಚಾರವಾಗಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಳ್ಳುತ್ತಿದ್ದ ಸಾಹಿಲ್ ಸಿದ್ದಿಕಿ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ವೆಸಗಿದ್ದಾನೆ. ಅಲ್ಲದೆ ಕೆಲ ದಿನಗಳ ಆಕೆಯನ್ನು ತನ್ನದೇ ಫ್ಲಾಟ್ ನಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡು ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಕೆಲವು ಪಾರ್ಟಿಗಳಿಗೆ ತನ್ನನ್ನು ಕರೆದುಕೊಂಡು ತನ್ನ ಸಹೋದ್ಯೋಗಿಗಳಿಂದಲೂ ತನ್ನ ಮೇಲೆ ಅತ್ಯಾಚಾರ ಮಾಡಿಸಿದ್ದಾನೆ. ಅಂತಹ ಒಂದು ಪಾರ್ಟಿಯ ಸಮಯದಲ್ಲಿ ಅವಳ 39 ವರ್ಷದ ರಸಾಯನಶಾಸ್ತ್ರ ಶಿಕ್ಷಕ ವಿಕಾಸ್ ಪೋರ್ವಾಲ್ ಕೂಡ ತನ್ನ ಮೇಲೆ ಅತ್ಯಾಚಾರವೆಸಗಿದ್ದನು ಎಂದು ವಿದ್ಯಾರ್ಥಿನಿ ದೂರಿನಲ್ಲಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಳಿ ಹಬ್ಬಕ್ಕೆ ಹೋಗಿದ್ದಾಗ ಬೆದರಿಕೆ
ಇನ್ನು ಇದೇ ವರ್ಷ ಹೋಳಿ ಹಬ್ಬದ ನಿಮಿತ್ತ ತಾನು ತನ್ನ ಪೋಷಕರ ನೋಡಲು ಮನೆಗೆ ಹೋಗಿದ್ದಾಗ ಸಿದ್ದಿಕಿ ಕರೆ ಮಾಡಿ ವಾಪಸ್ ಬರುವಂತೆ ಹೇಳಿದ್ದು, ಒಪ್ಪದಿದ್ದರೆ ಕುಟುಂಬಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾಳೆ.
ಇದೇ ಸಿದ್ದಿಕಿ ಈ ಹಿಂದೆ ಮತ್ತೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿನಿ ತನ್ನ ಭಯದ ಹೊರತಾಗಿಯೂ ಗುರುವಾರ ಪೊಲೀಸ್ ದೂರು ದಾಖಲಿಸಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶುಕ್ರವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದ್ದು, ಅದೇ ರಾತ್ರಿ ಸಿದ್ದಿಕಿ ಮತ್ತು ಪೋರ್ವಾಲ್ ಇಬ್ಬರನ್ನೂ ಬಂಧಿಸಲಾಗಿದೆ.
ಸಹಾಯಕ ಪೊಲೀಸ್ ಕಮಿಷನರ್ ಅಭಿಷೇಕ್ ಪಾಂಡೆ ಮಾತನಾಡಿ, "ಆರೋಪಿಗಳು ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ವಿದ್ಯಾರ್ಥಿನಿಯು ನಮಗೆ ತಿಳಿಸಿದ್ದಾಳೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆ ಸಮಯದಲ್ಲಿ ವಿದ್ಯಾರ್ಥಿನಿಯು ಅಪ್ರಾಪ್ತಳಾಗಿದ್ದು ಮತ್ತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳದಂತೆ ನಮ್ಮನ್ನು ವಿನಂತಿಸಿದ್ದಾರೆ ಎಂದು ಹೇಳಿದರು.
Advertisement