ಭೋಪಾಲ್: ರಾಷ್ಟ್ರಮಟ್ಟದ ಶಾಟ್‌ಪುಟ್ ಆಟಗಾರ ಅಮಿತ್ ವರ್ಮಾ ಅವರು ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಕರೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ವರ್ಮಾ ಅವರ ಸ್ನೇಹಿತರು ಅಪಾರ್ಟ್ ಮೆಂಟ್ ಗೆ ಬಂದು ನೋಡಿದಾಗ ಆತನ ಶವ ಪತ್ತೆಯಾಗಿರುವುದಾಗಿ ಟಿಟಿ ನಗರ ಪೊಲೀಸ್ ಠಾಣೆಯ ಉಸ್ತುವಾರಿ ಸುನಿಲ್ ಸಿಂಗ್ ಭಡೋರಿಯಾ ತಿಳಿಸಿದ್ದಾರೆ.
ಮನೆಯ ಬಳಿ ಬಂದ ಸ್ನೇಹಿತರು ಡೋರ್ ಬೆಲ್ ಮಾಡಿದ್ದಾರೆ. ಆದರೆ 22 ವರ್ಷದ ವರ್ಮಾ ಪ್ರತಿಕ್ರಿಯಿಸದಿದ್ದಾಗ ಮನೆಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಆತನ ಆತನ ಶವ ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮನೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಈ ಹಂತದಲ್ಲಿ ಏನನ್ನೂ ಊಹಿಸಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ವರ್ಮಾ ಸಾವಿಗೆ ಕಾರಣ ತಿಳಿಯಬಹುದಾಗಿದೆ. ಕಳೆದ ಒಂದು ವರ್ಷದಿಂದ ಭೋಪಾಲ್ ನಲ್ಲಿದ್ದ ಅಮಿತ್ ವರ್ಮಾ ಟಿಟಿ ನಗರ ಸ್ಟೇಡಿಯಂನಲ್ಲಿ ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ ಎಂದು ಪೊಲೀಸರು ಹೇಳಿದರು.
Advertisement