ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಲ್ಲಿನ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಚೌಕ್ ಬಳಿ ಸೋಮವಾರ ತಡರಾತ್ರಿ ಟ್ರಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ದುರ್ಮರಣ ಹೊಂದಿದ್ದಾರೆ. ಮೃತರಲ್ಲಿ ಮೂವರು ಹುಡುಗರು ಮತ್ತು ಮೂವರು ಹುಡುಗಿಯರು ಸೇರಿದ್ದಾರೆ. ಅವರೆಲ್ಲರೂ ಇಪ್ಪತ್ತರ ಹರೆಯದವರು ಎನ್ನಲಾಗಿದೆ.
ಘಟನೆ ಬಗ್ಗೆ ತಕ್ಷಣ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಳಗ್ಗೆ 2 ಗಂಟೆ ಸುಮಾರಿನಲ್ಲಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಸಿಲುಕಿದ್ದ ಏಳು ಮಂದಿಯನ್ನು ಆಸ್ಪತ್ರೆಗೆ ಸಾಗಿಸಿದ್ದೇವು. ಅವರಲ್ಲಿ ಆರು ಮಂದಿ ಮೃತಪಟ್ಟಿದ್ದು, ಓರ್ವ ಗಂಭೀರ ಪರಿಸ್ಥಿತಿಯಲ್ಲಿರುವುದಾಗಿ ವೈದ್ಯರು ಘೋಷಿಸಿದ್ದಾಗಿ ಕೊತ್ವಾಲಿ ಪೊಲೀಸರು ತಿಳಿಸಿದ್ದಾರೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಏಳು ಯುವಕರಿದ್ದ ಇನ್ನೋವಾ ಕಾರು ಟ್ರಕ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಡೆಹ್ರಾಡೂನ್ ನಿವಾಸಿ ಸಿದ್ಧೇಶ್ ಅಗರ್ವಾಲ್ (24) ಎಂಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement