YSRPC ಮೇಲೆ ಆಂಧ್ರ ಸರ್ಕಾರದ ಗದಾ ಪ್ರಹಾರ: 'ಅವಹೇಳನಕಾರಿ’ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ವಿರುದ್ಧ ಕಠಿಣ ಕಾನೂನು ಸಮರ!

ಕಳೆದ ಒಂದು ವಾರದಲ್ಲಿ ತನ್ನ ಪಕ್ಷದ ಕಾರ್ಯಕರ್ತರಿಗೆ 650 ಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ, 147 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 49 ಜನರನ್ನು ಬಂಧಿಸಲಾಗಿದೆ ಎಂದು ವೈಎಸ್‌ಆರ್‌ಸಿಪಿ ಪಕ್ಷದ ಮುಖಂಡರು ಆರೋಪಿಸಿದ್ದಾರೆ.
ಜಗನ್ ರೆಡ್ಡಿ ಮತ್ತು ಚಂದ್ರ ಬಾಬು ನಾಯ್ಡು
ಜಗನ್ ಮೋಹನ್ ರೆಡ್ಡಿ ಮತ್ತು ಚಂದ್ರಬಾಬು ನಾಯ್ಡು
Updated on

ಹೈದರಾಬಾದ್: ಆಂಧ್ರಪ್ರದೇಶದ ಟಿಡಿಪಿ ನೇತೃತ್ವದ ಸರ್ಕಾರವು ಪ್ರತಿಪಕ್ಷ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಗೆ ಸಂಬಂಧಿಸಿರುವ ಸಾಮಾಜಿಕ ಮಾಧ್ಯಮ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ. ಸಾಮಾಜಿಕ ಮಾಧ್ಯಮವನ್ನು ದ್ವೇಷ ಹರಡಲು ಮತ್ತು ಮಾನನಷ್ಟಕ್ಕಾಗಿ ದುರುಪಯೋಗಪಡಿಸಿಕೊಂಡವರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಾಮಾಜಿಕ ಜಾಲತಾಣಗಳಲ್ಲಿ ಅನುಚಿತ ವಿಷಯವನ್ನು ಪೋಸ್ಟ್ ಮಾಡುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, "ಯಾರಾದರೂ ಪ್ರಾಣಿಯಂತೆ ವರ್ತಿಸಿದರೆ, ಸರ್ಕಾರವು ಅವರನ್ನು ಪ್ರಾಣಿಯಂತೆ ಪರಿಗಣಿಸಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ವಿಷಯವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ರಾಜ್ಯಾದ್ಯಂತ 100 ಕ್ಕೂ ಹೆಚ್ಚು ವೈಎಸ್‌ಆರ್‌ಸಿಪಿ ಕಾರ್ಯಕರ್ತರನ್ನು ವಾರದ ಅವಧಿಯ ಪೋಲೀಸರು ಬಂಧಿಸಿದ್ದಾರೆ. ಅನೇಕರನ್ನು ಬಂಧಿಸಿರುವ ಪೊಲೀಸರು ನೂರಾರು ಲುಕ್‌ಔಟ್ ನೋಟಿಸ್‌ಗಳನ್ನು ಹೊರಡಿಸಿದ್ದಾರೆ ಮತ್ತು ವಿರೋಧ ಪಕ್ಷದೊಂದಿಗೆ ಸಂಪರ್ಕ ಹೊಂದಿದ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ಕಾರ್ಯಕರ್ತರು ಸಿಎಂ ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಅವರ ಕುಟುಂಬ, ಗೃಹ ಸಚಿವ ವಂಗಲಪುಡಿ ಅನಿತಾ, ಎಪಿಸಿಸಿ ಅಧ್ಯಕ್ಷೆ ವೈಎಸ್ ಶರ್ಮಿಳಾ ರೆಡ್ಡಿ ಮತ್ತು ದಿವಂಗತ ವೈಎಸ್ ವಿವೇಕಾನಂದ ರೆಡ್ಡಿ ಅವರ ಕುಟುಂಬ ಸದಸ್ಯರು ಹಾಗೂ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಆಕ್ಷೇಪಾರ್ಹ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದರಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಕಳೆದ ಒಂದು ವಾರದಲ್ಲಿ ತನ್ನ ಪಕ್ಷದ ಕಾರ್ಯಕರ್ತರಿಗೆ 650 ಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ, 147 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 49 ಜನರನ್ನು ಬಂಧಿಸಲಾಗಿದೆ ಎಂದು ವೈಎಸ್‌ಆರ್‌ಸಿಪಿ ಪಕ್ಷದ ಮುಖಂಡರು ಆರೋಪಿಸಿದ್ದಾರೆ.

ವೈಎಸ್‌ಆರ್‌ಸಿಪಿಯ ಸೋಷಿಯಲ್ ಮೀಡಿಯಾ ನೆಟ್‌ವರ್ಕ್, ತಾಡೆಪಲ್ಲಿ ಪಕ್ಷದ ಪ್ರಧಾನ ಕಛೇರಿಯಿಂದ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಾದ್ಯಂತ ಈ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಬಂಧಿತರಲ್ಲಿ 38 ವರ್ಷದ ವರ ರವೀಂದ್ರ ರೆಡ್ಡಿ, ವೈಎಸ್‌ಆರ್‌ಸಿಪಿ ಸಾಮಾಜಿಕ ಮಾಧ್ಯಮ ಕಾರ್ಯಕರ್ತ, ಆಂಧ್ರಪ್ರದೇಶ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಂಗಳವಾರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಗನ್ ರೆಡ್ಡಿ ಮತ್ತು ಚಂದ್ರ ಬಾಬು ನಾಯ್ಡು
YS Sharmila: ನನ್ನ ವಿರುದ್ಧದ ಅಶ್ಲೀಲ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಹಿಂದೆ ನನ್ನ ಸಹೋದರ ಜಗನ್ ಕೈವಾಡ! Video

ಮಾನಹಾನಿಕರ ವಿಷಯವನ್ನು ಹರಡಲು, ಹಾಗೂ ವಿವಿಧ ಸಮುದಾಯಗಳಲ್ಲಿ ಅಶಾಂತಿಯನ್ನು ಪ್ರಚೋದಿಸಲು ರವೀಂದ್ರ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ರವೀಂದ್ರ ಸುಮಾರು 40 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುತ್ತಿದ್ದರು, ವಿಶೇಷವಾಗಿ ಮಹಿಳಾ ನಾಯಕರನ್ನು ಗುರಿಯಾಗಿಸಿಕೊಂಡು ಅಸಭ್ಯ ವಿಷಯವನ್ನು ಹರಡಲು ಬಳಸಲಾಗುತ್ತಿದ್ದ. ರೆಡ್ಡಿ ಸೇರಿದಂತೆ 45 ವ್ಯಕ್ತಿಗಳು ಈ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖೆಯಿಂದ ಪತ್ತೆ ಹಚ್ಚಲಾಗಿದೆ. ಬೆಂಬಲಿಗರ ನೆಟ್‌ವರ್ಕ್‌ನಿಂದ ಸಂಘಟಿತವಾಗಿರುವ ಅವರ ಕ್ರಮಗಳು ವಿಭಜನೆಯನ್ನು ಉತ್ತೇಜಿಸುವ ಮತ್ತು ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡುವಂತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈಎಸ್‌ಆರ್‌ಸಿ ಸಾಮಾಜಿಕ ಮಾಧ್ಯಮ ಉಸ್ತುವಾರಿ ಸಜ್ಜಲ ಭಾರ್ಗವ್ ರೆಡ್ಡಿ ಅವರ ಸೂಚನೆಯಂತೆ ಸಾರ್ವತ್ರಿಕ ಚುನಾವಣೆಯ ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಪೋಸ್ಟ್ ಮಾಡಿರುವುದನ್ನು ರವೀಂದ್ರ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದಿನ ವೈಎಸ್‌ಆರ್‌ಸಿ ಸರ್ಕಾರದ ಮೂರು ರಾಜಧಾನಿಗಳ ಪ್ರಸ್ತಾಪದ ತೀರ್ಪುಗಾಗಿ ನ್ಯಾಯಾಂಗದ ವಿರುದ್ಧ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಲು ರವೀಂದ್ರರ ಮೇಲೆ ಭಾರ್ಗವ್ ರೆಡ್ಡಿ ಒತ್ತಾಯಿಸಿದ ಆರೋಪ ಸೇರಿದಂತೆ ಹಲವು ವಿವರಗಳನ್ನು ರಿಮಾಂಡ್ ವರದಿ ಬಹಿರಂಗಪಡಿಸಿದೆ.

ಕಾರ್ಯಾಚರಣೆಯ ಪ್ರಾರಂಭದಿಂದಲೂ ಸಾಮಾಜಿಕ ಮಾಧ್ಯಮದ ಹಲವು ವಿಷಯಗಳನ್ನು ಭಾರ್ಗವ್ ರೆಡ್ಡಿ ನಿಯಂತ್ರಿಸುತ್ತಿದ್ದರು ಎಂದು ರವೀಂದ್ರ ಹೇಳಿದ್ದಾರೆ. ವೈಎಸ್ ವಿಜಯಮ್ಮ, ವೈಎಸ್ ಶರ್ಮಿಳಾ ರೆಡ್ಡಿ ಮತ್ತು ಎನ್ ಸುನೀತಾ ವಿರುದ್ಧ ಮಾನಹಾನಿಕರ ವಿಷಯವನ್ನು ಪೋಸ್ಟ್ ಮಾಡುವಂತೆ ಭಾರ್ಗವ್ ರೆಡ್ಡಿ ಅವರಿಗೆ ನಿರ್ದೇಶನ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪಕ್ಷದ ಕಾರ್ಯಕರ್ತ ಮತ್ತು ಜಗನ್ ಮೋಹನ್ ರೆಡ್ಡಿ ಅವರ ಆಪ್ತರಾಗಿದ್ದ ಭಾರ್ಗವ್ ರೆಡ್ಡಿ, ಅರ್ಜುನ್ ರೆಡ್ಡಿ, ಕಡಪ ಸಂಸದ ವೈಎಸ್ ಅವಿನಾಶ್ ರೆಡ್ಡಿ ಅವರ ಆಪ್ತ ರಾಘವ ರೆಡ್ಡಿ ಸೇರಿದಂತೆ ಇತರ ಪ್ರಮುಖರನ್ನು ಬಂಧಿಸಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಕರ್ನೂಲ್ ವಲಯ ಡಿಐಜಿ ಕೋಯ ಪ್ರವೀಣ್ ಖಚಿತಪಡಿಸಿದ್ದಾರೆ. .

ಈ ಬೆಳವಣಿಗೆಗಳ ನಂತರ, ಹಲವಾರು ಸಾಮಾಜಿಕ ಮಾಧ್ಯಮ ಕಾರ್ಯಕರ್ತರು ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅದೇ ರೀತಿ, ಸಿಎಂ ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಮಾರ್ಫ್ ಮಾಡಿದ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರನ್ನು ವಿಚಾರಣೆಗೆ ಕರೆದಿದ್ದಾರೆ. ನವೆಂಬರ್ 11 ರಂದು, ಆ ತಿರುಚಿದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ವರ್ಮಾ ವಿರುದ್ಧ ಪ್ರಕಾಶಂ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com