ಅಮರಾವತಿ: ಆಂಧ್ರಪ್ರದೇಶ ರಾಜಕೀಯ ಮತ್ತು ಆಸ್ತಿ ವಿಚಾರವಾಗಿ ಪರಸ್ಪರ ಎದುರಾಳಿಗಳಾಗಿ ನಿಂತಿರುವ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಮಕ್ಕಳಾದ ವೈಎಸ್ ಜಗನ್ ಹಾಗೂ ವೈಎಸ್ ಶರ್ಮಿಳಾ ನಡುವಿನ ಸಮರ ಇದೀಗ ಮತ್ತೊಂದು ಹಂತಕ್ಕೆ ಹೋಗಿದೆ.
ಈ ಹಿಂದೆ ಆಸ್ತಿ ವಿಚಾರವಾಗಿ ಪರಸ್ಪರ ವಾಗ್ದಾಳಿ ನಡೆಸಿದ್ದ ರಾಜಶೇಖರ ರೆಡ್ಡಿ ಮಕ್ಕಳು ಇದೀಗ ಬಹಿರಂಗವಾಗಿಯೇ ಪರಸ್ಪರ ವಾಗ್ದಾಳಿ ನಡೆಸಿದ್ದು, 'ನನ್ನ ವಿರುದ್ಧದ ಅಶ್ಲೀಲ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಹಿಂದೆ ನನ್ನ ಸಹೋದರ ಜಗನ್ ಕೈವಾಡ'ವಿದೆ ಎಂದು ವೈಎಸ್ ಶರ್ಮಿಳಾ ಗಂಭೀರ ಆರೋಪ ಮಾಡಿದ್ದಾರೆ.
ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಮಂಗಳವಾರ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಪೋಸ್ಟ್‌ಗಳನ್ನು ಪ್ರೋತ್ಸಾಹಿಸಿದ್ದಾರೆ. ಅವರ ಬೆಂಬಲಿಗರ ಮೂಲಕ ನನ್ನ ವಿರುದ್ಧ ಮತ್ತು ನನ್ನ ತಾಯಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್ ಗಳನ್ನು ಹಾಕಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಜಯವಾಡದ ಆಂಧ್ರ ರತ್ನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರ್ಮಿಳಾ, 'ಸೋಷಿಯಲ್ ಮೀಡಿಯಾದಲ್ಲಿ ತಾನು ಕಟುವಾದ ದಾಳಿಗೆ ಬಲಿಯಾಗಿದ್ದೇನೆ ಎಂದು ಆರೋಪಿಸಿರುವ ಶರ್ಮಿಳಾ, 'ಜಗನ್ ಮೋಹನ್ ರೆಡ್ಡಿ ಒಂದೇ ಒಂದು ಮಾತು ಹೇಳಿದ್ದರೆ ಇಂತಹ ಪೋಸ್ಟ್ ಗಳನ್ನು ಅವರ ಬೆಂಬಲಿಗರು ನಿಲ್ಲಿಸುತ್ತಿದ್ದರು. ಆದರೆ ಅವರು ಹಾಗೆ ಮಾಡಿಲ್ಲ. ಅವರಿಗೂ ಅದೇ ಬೇಕು ಎಂದೆನಿಸುತ್ತದೆ. ನನ್ನ ವಿರುದ್ಧದ ಅಶ್ಲೀಲ ಪೋಸ್ಟ್ ಗಳನ್ನು ಅವರು ನೇರವಾಗಿಯೇ ಬೆಂಬಲಿಸುತ್ತಿದ್ದಾರೆ ಎಂದು ಶರ್ಮಿಳಾ ಹೇಳಿದರು.
'ನನ್ನ ಬಗ್ಗೆ ಸುನೀತಾ ರೆಡ್ಡಿ (ದಿವಂಗತ ವೈಎಸ್ ವಿವೇಕಾನಂದ ರೆಡ್ಡಿ ಅವರ ಪುತ್ರಿ) ಮತ್ತು ತಾಯಿ (ವೈಎಸ್ ವಿಜಯಮ್ಮ) ಬಗ್ಗೆ ಅವರು (ಸಾಮಾಜಿಕ ಮಾಧ್ಯಮ ಕಾರ್ಯಕರ್ತರು) ಅವರಿಗೆ ಇಷ್ಟ ಬಂದಂತೆ ಮಾತನಾಡಿದ್ದಾರೆ. ವೈಎಸ್ ಆರ್ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಕಾರ್ಯಕರ್ತರು ಪೈಶಾಚಿಕ ಸೇನೆಯಾಗಿ ಹೊರಹೊಮ್ಮಿದ್ದಾರೆ. ಅವರ ಈ ಕಾರ್ಯಕ್ಕೆ ಬ್ರೇಕ್ ಹಾಕಲೇಬೇಕು. ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಇಂತಹ ಅಶ್ಲೀಲ ಪೋಸ್ಟ್ ಮಾಡುವವರನ್ನು ಬಂಧಿಸಿದೆಯಾದರೂ ಅವರ ಹಿಂದೆ ಇರುವ ದೊಡ್ಡ ಕೈಗಳನ್ನೂ ಕೂಡ ಬಂಧಿಸಬೇಕು. ಅವರೇ ನಿಜವಾದ ಅಪರಾಧಿಗಳು.. ಶರ್ಮಿಳಾ ಹೇಳಿದರು.
Advertisement