ಭೋಪಾಲ್ (ಮಧ್ಯಪ್ರದೇಶ): ಸಿಬ್ಬಂದಿ ಪಿಜ್ಜಾ ಆರ್ಡರ್ ತೆಗೆದುಕೊಳ್ಳಲು ನಿರಾಕರಿಸಿದ ಕಾರಣ ಪುಡಿ ರೌಡಿಯೊಬ್ಬ ಕೆಫೆಯ ಗೇಟ್‌ನಲ್ಲಿ ಬುಧವಾರ ತಡರಾತ್ರಿ ಗುಂಡು ಹಾರಿಸಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.
ಕಳೆದ ರಾತ್ರಿ ಕೆಲವೇ ಗ್ರಾಹಕರು ಇದ್ದಾಗ ಮತ್ತು ಮುಚ್ಚಲಿರುವ ಕೆಫೆಗೆ ಇಬ್ಬರು ಯುವಕರು ಪ್ರವೇಶಿಸುತ್ತಿರುವುದನ್ನು ವೀಡಿಯೊ ಕಾಣಿಸುತ್ತದೆ. ಅವರಲ್ಲೊಬ್ಬ ಕೈಯಲ್ಲಿ ಕಪ್ಪು ಬಂದೂಕು ಹಿಡಿದಿರುವುದು ಕಾಣಿಸುತ್ತಿದೆ. ಆತ ಕೌಂಟರ್ಗೆ ಹೋಗಿ ಆರ್ಡರ್ ತೆಗೆದುಕೊಳ್ಳುವಂತೆ ಹೇಳುತ್ತಾನೆ. ಅಡುಗೆ ಕೋಣೆ ಈಗಾಗಲೇ ಮುಚ್ಚಿದೆ ಎಂದು ಸಿಬ್ಬಂದಿ ಹೇಳಿ ಯಾವುದೇ ಆರ್ಡರ್ ತೆಗೆದುಕೊಳ್ಳಲು ನಿರಾಕರಿಸಿದರು. ಇದರಿಂದ ಕೆರಳಿದ ಯುವಕ ಹೊರಗೆ ಹೋಗಿ ಕೆಫೆಟೇರಿಯಾದ ಬಾಗಿಲಿಗೆ ಗುಂಡು ಹಾರಿಸಿದ್ದಾನೆ.
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಫೆ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಮಾಹಿತಿ ಪ್ರಕಾರ, ಗ್ವಾಲಿಯರ್‌ನ ಐಷಾರಾಮಿ ಪಟೇಲ್ ನಗರದಲ್ಲಿರುವ ಕೆಫೆಟೇರಿಯಾದಲ್ಲಿ ಈ ಘಟನೆ ನಡೆದಿದೆ. ರಾತ್ರಿ ನೌಕರರು ತಮ್ಮ ಕೆಫೆಯನ್ನು ಮುಚ್ಚಲು ಮುಂದಾಗಿದ್ದರು. ಆಗ ಇಬ್ಬರು ಯುವಕರು ಅಲ್ಲಿಗೆ ಬಂದು ಪಿಜ್ಜಾ ಆರ್ಡರ್ ಮಾಡಿದ್ದಾರೆ. ಅಡುಗೆ ಮನೆ ಮುಚ್ಚಿದೆ ಎಂದು ಉದ್ಯೋಗಿ ಹೇಳಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಶಂಕಿತರು ತಮ್ಮ ಕಾರಿಗೆ ಹಿಂತಿರುಗಿ, ಬಂದೂಕನ್ನು ಹೊರತೆಗೆದು ನೌಕರರನ್ನು ಹೆದರಿಸಲು ಎರಡು ಗುಂಡು ಹಾರಿಸಿದರು. ಅವರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ನೌಕರರನ್ನು ಬಂದೂಕು ತೋರಿಸಿ ಬೆದರಿಸಿ ಪಿಜ್ಜಾ ಮಾಡಲು ಒತ್ತಾಯಿಸಿದರು. ತಿಂದ ನಂತರ ಅವರು ಓಡಿಹೋದರು ಎಂದು ದೂರಿದ್ದಾರೆ.
ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಶಂಕಿತರ ಕೃತ್ಯಗಳು ದಾಖಲಾಗಿವೆ. ಕೆಫೆ ಉದ್ಯೋಗಿಯೊಬ್ಬರ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಅಪರಿಚಿತ ಶಂಕಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ನಿರತವಾಗಿದ್ದು, ಶೀಘ್ರವೇ ಬಂಧಿಸುವುದಾಗಿ ಎಂದು ಹೇಳಿದ್ದಾರೆ.
Advertisement