ಮುಂಬೈ: ನವೆಂಬರ್ 20 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರದ ಕಣ ರಂಗೇರಿರುವಂತೆಯೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಬಿರುಕಿಗೆ ಕಾರಣವಾಗಿದೆ. ಯೋಗಿ ಆದಿತ್ಯನಾಥ್ ಅವರ 'ಬಟೇಂಗೆ ತೊ ಕಟೆಂಗೆ' ಘೋಷಣೆಯನ್ನು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬಹಿರಂಗವಾಗಿಯೇ ಟೀಕಿಸಿದ್ದು, ಮಹಾರಾಷ್ಟ್ರಕ್ಕೆ ಅದು ಸೂಕ್ತವಲ್ಲಾ ಎಂದಿದ್ದಾರೆ. ಆದರೆ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅದನ್ನು ಸಮರ್ಥಿಸಿಕೊಂಡಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಜಿತ್ ಪವಾರ್ ತನ್ನ ನಿಲುವನ್ನು ತಿಳಿಸಿದರು. ಬಹಿರಂಗ ಪ್ರಚಾರ ಸಭೆ ಮತ್ತು ಮಾಧ್ಯಮ ಸಂವಾದಗಳಲ್ಲಿ ಯೋಗಿ ಆದಿತ್ಯನಾಥ್ ಘೋಷಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದೇನೆ. ಇದಕ್ಕೆ ಕೆಲ ಬಿಜೆಪಿ ನಾಯಕರು ಧ್ವನಿಗೂಡಿಸಿದ್ದಾರೆ. ಮಹಾರಾಷ್ಟ್ರ ಸಬ್ ಕಾ ಸಾಥ್, ಸಾಬ್ ಕಾ ವಿಕಾಸ್ ಮಂತ್ರವನ್ನು ಅನುಸರಿಸುತ್ತದೆ. ಪ್ರಧಾನಿ ಅವರ ಒಗ್ಗಟಿಲ್ಲದಿದ್ದರೆ ಸುರಕ್ಷತೆ ಅಸಾಧ್ಯ ಎಂಬುದು ನಮ್ಮ ತತ್ವವಾಗಿದೆ. ಆದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಘೋಷಣೆ ಸರಿಯಲ್ಲ, ಇದು ಉತ್ತರ ಪ್ರದೇಶ ಅಲ್ಲ. ಅಂತಹ ಘೋಷಣೆಗಳು ಉತ್ತರದಲ್ಲಿ ಪ್ರತಿಧ್ವನಿಸಬಹುದು, ಆದರೆ, ಇಲ್ಲಿಗೆ ಸಂಬಂಧಿಸಿಲ್ಲ ಎಂದರು.
ಈ ನಿಟ್ಟಿನಲ್ಲಿ ದೇವೇಂದ್ರ ಫಡ್ನವೀಸ್ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಒಗ್ಗಟ್ಟಿನ ಪ್ರಾಮುಖ್ಯತೆಗೆ ಒತ್ತು ನೀಡುತ್ತದೆ. ಯೋಗಿ ಅವರ ಘೋಷಣೆಯಲ್ಲಿ ಯಾವುದೇ ತಪ್ಪು ನನಗೆ ಕಾಣಿಸುತ್ತಿಲ್ಲ. ಜಾತಿ, ಸಮುದಾಯ, ರಾಜ್ಯಗಳ ನಡುವಿನ ವಿಭಜನೆಯಿಂದ ನಮ್ಮ ದೇಶ ದುರ್ಬಲವಾಗಿರುವುದನ್ನು ಚರಿತ್ರೆ ನಮ್ಮಗೆ ತೋರಿಸುತ್ತದೆ ಎಂದು ಹೇಳಿದರು. ಟೀಕೆಯನ್ನು ತಳ್ಳಿ ಹಾಕಿದರು.
ಅಜಿತ್ ಪವಾರ್ ದಶಕಗಳ ಕಾಲ ಜಾತ್ಯತೀತ ಮತ್ತು ಹಿಂದೂ ವಿರೋಧಿ ಸಿದ್ದಾಂತಗಳಲ್ಲಿ ಕೆಲಸ ಮಾಡಿದ್ದು, ಹೀಗಾಗಿ ಜಾತ್ಯತೀತ ಮತ್ತು ಹಿಂದೂ ವಿರೋಧಿ ಹೇಳಿಕೆ ನೀಡಿರಬಹುದು. ಸಾರ್ವಜನಿಕರ ಭಾವನೆಗಳೊಂದಿಗೆ ಹೊಂದಿಕೊಳ್ಳಲು ಅವರಿಗೆ ಸಮಯ ಬೇಕಾಗುತ್ತದೆ ಎಂದರು. ಯೋಗಿ ಆದಿತ್ಯನಾಥ್ ಅವರ ಘೋಷಣೆಯನ್ನು ಪ್ರತಿಪಕ್ಷ ಮಹಾ ವಿಕಾಸ್ ಆಘಾಡಿ ಟೀಕಿಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳಿಕೆ ಕೋಮುಸಂಘರ್ಷಕ್ಕೆ ಕಾರಣವಾಗಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.
Advertisement