ನವದೆಹಲಿ: ಬಹು ನಿರೀಕ್ಷಿತ 'ಹೈಪರ್‌ಸಾನಿಕ್ ಕ್ಷಿಪಣಿ' ಪರೀಕ್ಷಾರ್ಥ ಪ್ರಯೋಗ ಮಾಡುವ ಮೂಲಕ ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಈ ಪರೀಕ್ಷೆ ಯಶಸ್ವಿಯಾಗುವ ಮೂಲಕ ಭಾರತ ಈ ಕ್ಷಿಪಣಿ ವ್ಯವಸ್ಥೆ ಇರುವ ಕೆಲವೇ ದೇಶಗಳ Elite Group ಸೇರಿದೆ.
ಹೌದು.. ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ದೀರ್ಘ ವ್ಯಾಪ್ತಿಯ ಹೈಪರ್‌ಸಾನಿಕ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಭಾನುವಾರ ಘೋಷಿಸಿದ್ದಾರೆ.
ಶನಿವಾರದಂದು ಈ ಪರೀಕ್ಷೆ ನಡೆಸಲಾಗಿದ್ದು, ಇದರಿಂದ ದೇಶದ ರಕ್ಷಣಾ ಸಾಮರ್ಥ್ಯ ಇನ್ನಷ್ಟು ಬಲಗೊಂಡಿದೆ. ಹೈಪರ್‌ಸಾನಿಕ್ ಕ್ಷಿಪಣಿಯ ಪರೀಕ್ಷೆಯನ್ನು ಐತಿಹಾಸಿಕ ಎಂದು ಬಣ್ಣಿಸಿರುವ ರಾಜನಾಥ ಸಿಂಗ್, 'ಇಂತಹ ಗಮನಾರ್ಹ ಸುಧಾರಿತ ಮಿಲಿಟರಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಗುಂಪಿನಲ್ಲಿ ಭಾರತವು ಗುರುತಿಸಿಕೊಂಡಿದೆ' ಎಂದು ಹೇಳಿದ್ದಾರೆ.
ಈ ಅದ್ಭುತ ಸಾಧನೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಸಶಸ್ತ್ರ ಪಡೆಗಳು ಮತ್ತು ಎಲ್ಲರನ್ನು ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.
1500 ಕಿಮೀ ಸಾಮರ್ಥ್ಯದ ಕ್ಷಿಪಣಿ
ಇನ್ನು ಈ ಹೈಪರ್‌ಸಾನಿಕ್ ಕ್ಷಿಪಣಿ 1,500 ಕಿ.ಮೀ.ಗೂ ಹೆಚ್ಚು ದೂರ ಹಲವು ಪೇಲೋಡ್‌ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಇದು ಭಾರತದ ಎಲ್ಲ ಸೇನಾಪಡೆಗಳ ನೆರವಿಗೆ ಬರಲಿದೆ.
ಷಿಪಣಿ ಉಡಾಯಿಸಿದ ಬಳಿಕ ವಿವಿಧೆಡೆ ನಿಯೋಜಿಸಲಾದ ರೇಂಜ್ ಸಿಸ್ಟಂಗಳ ಮೂಲಕ ಅದನ್ನು ಸೂಕ್ಷ್ಮವಾಗಿ ಗಮನಿಸಲಾಗಿದೆ. ಹಾರಾಟದ ದತ್ತಾಂಶಗಳನ್ನು ಡೌನ್‌ರೇಂಜ್ ಶಿಪ್ ಸ್ಟೇಷನ್‌ಗಳ ಮೂಲಕ ಸಂಗ್ರಹಿಸಲಾಗಿದ್ದು, ನಿಖರತೆ ಮತ್ತು ಪೂರ್ವಯೋಜನೆಯಂತೆಯೇ ವಿವಿಧ ಚಲನೆಗಳು ಯಶಸ್ವಿಯಾಗಿವೆ ಎಂದು ದೃಢಪಡಿಸಲಾಗಿದೆ.
ಕ್ಷಿಪಣಿಯನ್ನು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮಿಸೈಲ್ ಕಾಂಪ್ಲೆಕ್ಸ್ ಹೈದರಾಬಾದ್‌ನಲ್ಲಿರುವ ಪ್ರಯೋಗಾಲಯಗಳು ಮತ್ತು ಡಿಆರ್‌ಡಿಒದ ವಿವಿಧ ಪ್ರಯೋಗಾಲಯಗಳು ಹಾಗು ಇತರೆ ಕೈಗಾರಿಕಾ ಪಾಲುದಾರರ ಜೊತೆಗೂಡಿ ಸ್ವದೇಶಿಯವಾಗಿ ಅಭಿವೃದ್ಧಿಪಡಿಸಲಾಗಿತ್ತು. ಉಡ್ಡಯನದ ವೇಳೆ ಡಿಆರ್‌ಡಿಒದ ಹಿರಿಯ ವಿಜ್ಞಾನಿಗಳು ಮತ್ತು ಸೇನಾಪಡೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement