ಲಖನೌ: ಉತ್ತರ ಭಾರತದಲ್ಲಿ ದಟ್ಟ ಮಂಜು ಮುಂದುವರೆದಿರುವಂತೆಯೇ ಉತ್ತರ ಪ್ರದೇಶದ ನೋಯ್ಡಾದಲ್ಲಿ ಎಕ್ಸ್ ಪ್ರೆಸ್ ವೇನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, 12 ವಾಹನಗಳು ಢಿಕ್ಕಿಯಾಗಿ 2 ಪ್ರತ್ಯೇಕ ಅವಘಡಗಳಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನೋಯ್ಡಾದ ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಸರಣಿ ಅಪಘಾತ ನಡೆದಿದ್ದು, ಕಾರು ಮತ್ತು ಸರಕು ಸಾಗಾಣಿಕಾ ಟ್ರಕ್ ನಡುವೆ ಮೊದಲು ಅಪಘಾತವಾಗಿದ್ದು, ಬಳಿಕ ಇದರ ಹಿಂದೆಯೇ ಬೈಕ್ ಗಳು ಮತ್ತು ಕಾರುಗಳು, ಗೂಡ್ಸ್ ವಾಹನಗಳು ಸೇರಿದಂತೆ ಒಟ್ಟು 12 ವಾಹನಗಳು ಢಿಕ್ಕಿಯಾಗಿವೆ.
ಮೂಲಗಳ ಪ್ರಕಾರ ಪಾಣಿಪತ್‌ನಿಂದ ಮಥುರಾಗೆ ತೆರಳುತ್ತಿದ್ದ ಬಸ್‌ಗೆ ಟ್ರಕ್‌ಗಳನ್ನು ಗುರುತಿಸಲು ಸಾಧ್ಯವಾಗದೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿದ್ದ ಸುಮಾರು 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಅದೇ ರೀತಿ ಇತ್ತ ದೆಹಲಿಯ ಆಗ್ರಾ ಬಳಿಯ ಫಿರೋಜಾಬಾದ್‌ನಲ್ಲಿ, ಪಿಕ್ ಅಪ್ ಟ್ರಕ್ ಕೆಟ್ಟುಹೋಗಿ ರಸ್ತೆಯಲ್ಲೇ ನಿಂತಿತ್ತು. ಈ ವೇಳೆ ದಟ್ಟ ಮಂಜಿನಿಂದಾಗಿ ರಸ್ತೆ ಕಾಣದಂತಾಗಿ ಅದಕ್ಕೆ ಆರು ವಾಹನಗಳು ಡಿಕ್ಕಿ ಹೊಡೆದಿವೆ. ಈ ದುರ್ಘಟನೆಯಲ್ಲೂ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸೈಫಾಯಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯ ನಾಸಿರ್‌ಪುರ ಬಳಿ ಈ ಘಟನೆ ನಡೆದಿದೆ.
ಅಂತೆಯೇ ಬುಲಂದ್‌ಶಹರ್‌ನಲ್ಲಿ ವೇಗವಾಗಿ ಬಂದ ಟ್ರಕ್ ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರನ ಸಾವಿಗೆ ಕಾರಣವಾಯಿತು. ರಾಷ್ಟ್ರೀಯ ಹೆದ್ದಾರಿ-34ರಲ್ಲಿ ಕಡಿಮೆ ಗೋಚರತೆಯಿಂದಾಗಿ ಟ್ರಕ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೈನ್‌ಪುರಿ ನಿವಾಸಿ ಮನ್ಶರಾಮ್ ಸಾವನ್ನಪ್ಪಿದ್ದಾರೆ. ಪೊಲೀಸರು ಟ್ರಕ್ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಂತೆಯೇ ಬದೌನ್ ಬಳಿ ಮತ್ತೊಂದು ರಸ್ತೆ ದುರಂತ ಸಂಭವಿಸಿದ್ದು, ಮೌವಿನಲ್ಲಿರುವ ಶಾಲೆಗೆ ಹೋಗುತ್ತಿದ್ದ ಶಿಕ್ಷಕ ಸಂತೋಷ್ ಸಿಂಗ್ ಅವರ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಇದೇ ರೀತಿಯ ಅಪಘಾತದಲ್ಲಿ ಇನ್ನೂ ಹತ್ತು ಮಂದಿ ಗಾಯಗೊಂಡಿದ್ದಾರೆ.
Advertisement