ತಿರುಮಲ: ಹೊಸದಾಗಿ ರಚನೆಯಾಗಿರುವ ತಿರುಮಲ ತಿರುಪತಿ ದೇವಸ್ತಾನಂ(ಟಿಟಿಡಿ) ಟ್ರಸ್ಟ್ ಬೋರ್ಡ್ ಸೋಮವಾರ ಮೊದಲ ಬಾರಿಗೆ ಸಭೆ ಸೇರಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂಯೇತರ ಸಿಬ್ಬಂದಿಗೆ ಕೋಕ್ ನೀಡಲಾಗುತ್ತಿದೆ.
ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂಯೇತರ ಸಿಬ್ಬಂದಿ ಸ್ವಯಂ ನಿವೃತ್ತಿ(ವಿಆರ್ ಎಸ್) ತೆಗೆದುಕೊಳ್ಳಬೇಕು ಅಥವಾ ಆಂಧ್ರಪ್ರದೇಶದ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆಯಾಗಬೇಕು ಎಂಬ ನಿರ್ಣಯವನ್ನು ಟಿಟಿಡಿ ಅಂಗೀಕರಿಸಿದೆ.
ವಿಶಾಖ ಶಾರದಾ ಪೀಠಕ್ಕೆ ನೀಡಿರುವ ಜಮೀನಿನ ಗುತ್ತಿಗೆಯನ್ನು ರದ್ದುಪಡಿಸುವುದು ಮತ್ತು ಪ್ರತಿ ತಿಂಗಳ ಮೊದಲ ಮಂಗಳವಾರದಂದು ಸ್ಥಳೀಯ ಜನರಿಗೆ ದರ್ಶನ ನೀಡುವುದು ಸೇರಿದಂತೆ ಹಲವು ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಮಾಧ್ಯಮ ಪ್ರತಿನಿಧಿಗಳಿಗೆ ಸಭೆಯ ವಿವರಗಳನ್ನು ತಿಳಿಸಿದ ಟಿಟಿಡಿ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಬಿಆರ್ ನಾಯ್ಡು, ಟಿಟಿಡಿಯೊಂದಿಗೆ ಕೆಲಸ ಮಾಡುವ ಇತರ ಧರ್ಮದ ನೌಕರರೊಂದಿಗೆ ಸಮಾಲೋಚನೆ ನಡೆಸಲು ಮಂಡಳಿಯು ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
ಸ್ವಯಂ ನಿವೃತ್ತಿ ಪಡೆಯುವ ಅಥವಾ ಬೇರೆ ಯಾವುದೇ ಸರ್ಕಾರಿ ಇಲಾಖೆಗೆ ಸೇರುವ ಆಯ್ಕೆಯನ್ನು ಅವರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.
ತಿರುಮಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಟಿಟಿಡಿ ಹಿಂದೂ ಧಾರ್ಮಿಕ ಸಂಸ್ಥೆಯಾಗಿದ್ದು, ದೇವಸ್ಥಾನದಲ್ಲಿ ಕೆಲಸ ಮಾಡಲು ಹಿಂದೂಯೇತರರನ್ನು ನೇಮಿಸಿಕೊಳ್ಳಬಾರದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಅವರನ್ನು ಬೇರೆ ಬೇರೆ ಇಲಾಖೆಗಳಲ್ಲಿ ಸೇರಿಸಿಕೊಳ್ಳಲು ಅಥವಾ ಅವರಿಗೆ ಸ್ವಯಂ ನಿವೃತ್ತಿ ಯೋಜನೆ ನೀಡಲು ನಾವು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ಬಿ.ಆರ್ ನಾಯ್ದು ಹೇಳಿದ್ದಾರೆ.
ಟಿಟಿಡಿಯಿಂದ ಭೂಮಿಯನ್ನು ಗುತ್ತಿಗೆಗೆ ಪಡೆದಿರುವ ವಿಶಾಖ ಶಾರದಾ ಪೀಠವು ಹಲವಾರು ಉಲ್ಲಂಘನೆಗಳನ್ನು ಮಾಡಿದೆ ಎಂದು ಪ್ರತಿಪಾದಿಸಿದ ಅವರು, ಜಮೀನು ಗುತ್ತಿಗೆಯನ್ನು ರದ್ದುಗೊಳಿಸಲಾಗುವುದು ಮತ್ತು ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡವನ್ನು ನೆಲಸಮಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇನ್ನು ಕೇವಲ 2 ರಿಂದ 3 ಗಂಟೆಯೊಳಗೆ ಸಾಮಾನ್ಯ ಭಕ್ತರು ದೇವರ ದರ್ಶನ ಪಡೆಯುವಂತೆ ಬದಲಾವಣೆ ತರಲು ಎಐ ಮತ್ತು ಆಧುನಿಕ ತಂತ್ರಜ್ಞಾನ ಬಳಸಲು ಕ್ರಮಕೈಗೊಳ್ಳಲಾಗಿದೆ. ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರಿಗೆ ತೊಂದರೆ, ಕಿರಿಕಿರಿ ಉಂಟಾಗದಂತೆ ದರ್ಶನ ಲಭ್ಯವಾಗಲು ಈ ಯೋಜನೆ ರೂಪಿಸಲಾಗಿದೆ ಎಂದು ನಾಯ್ಡು ಹೇಳಿದ್ದಾರೆ.
Advertisement