ಲಂಡನ್: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು, ಪ್ರಸಕ್ತ ಸಾಲಿನಲ್ಲೇ ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ (ಎಫ್‌ಟಿಎ) ಮಾತುಕತೆಯನ್ನು ಪುನರಾಂಭಿಸುವುದಾಗಿ ಘೋಷಿಸಿದ್ದಾರೆ.
ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವುದು, ದುಡಿಯುವ ಜನರ ಜೀವನ ಮಟ್ಟವನ್ನು ಸುಧಾರಿಸಲು ಪ್ರಮುಖವಾಗಿದ್ದು, ಭಾರತದೊಂದಿಗಿನ ಹೊಸ ವ್ಯಾಪಾರ ಒಪ್ಪಂದವು ಬ್ರಿಟನ್ ನಲ್ಲಿ ಉದ್ಯೋಗಗಳು ಮತ್ತು ಸಮೃದ್ಧಿಯನ್ನು ಬೆಂಬಲಿಸುತ್ತದೆ ಮತ್ತು ನಮ್ಮ ದೇಶದಾದ್ಯಂತ ಬೆಳವಣಿಗೆ ಮತ್ತು ಅವಕಾಶವನ್ನು ತಲುಪಿಸುವ ನಮ್ಮ ಉದ್ದೇಶವನ್ನು ಪ್ರತಿನಿಧಿಸುತ್ತದೆ ಎಂದು ಸ್ಟಾರ್ಮರ್ ಹೇಳಿದ್ದಾರೆ.
ದ್ವಿಪಕ್ಷೀಯ ಮಾತುಕತೆ ಬಳಿಕ ಪತ್ರಿಕಾ ಪ್ರಕಟಣೆ ನೀಡಿರುವ ಬ್ರಿಟನ್ ಪ್ರಧಾನಿ ಕಾರ್ಯಾಲಯವು, 'ವ್ಯಾಪಾರ ಒಪ್ಪಂದ, ಭದ್ರತೆ, ಶಿಕ್ಷಣ, ತಂತ್ರಜ್ಞಾನ ಮತ್ತು ಹವಾಮಾನ ಬದಲಾವಣೆಯಂತಹ ಕ್ಷೇತ್ರಗಳಲ್ಲಿ ಸಮಗ್ರ ಸಹಕಾರ ಒಳಗೊಂಡಂತೆ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಯಸುತ್ತದೆ ಎಂದು ಹೇಳಿದೆ.
ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತ, ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆದು ಬರುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಭಾರತದೊಂದಿಗೆ ಸಮಗ್ರ ವಾಣಿಜ್ಯ ಒಪ್ಪಂದ ಮಾತುಕತೆ ಪುನರಾರಂಭಿಸಲು ಬ್ರಿಟನ್ ಬದ್ಧವಾಗಿದೆ' ಎಂದು ತಿಳಿಸಿದೆ.
ಭಾರತದೊಂದಿಗಿನ ವ್ಯಾಪಾರ ಒಪ್ಪಂದವು ಬ್ರಿಟನ್‌ನಲ್ಲಿ ಉದ್ಯೋಗ ಸೃಷ್ಟಿ ಹಾಗೂ ಸಮೃದ್ಧಿಗೆ ಕಾರಣವಾಗಲಿದೆ. ಆ ಮೂಲಕ ಬೆಳವಣಿಗೆಯತ್ತ ಮತ್ತೊಂದು ಹೆಜ್ಜೆ ಇಡಲಾಗುತ್ತದೆ ಎಂದು ಪ್ರಕಟಿಸಿದೆ.
ಈ ನಡುವೆ ಬ್ರಿಟನ್ ಪ್ರಧಾನಿಯೊಂದಿಗಿನ ಮಾತುಕತೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ಮಾತುಕತೆಯನ್ನು 'ಅತ್ಯಂತ ಫಲಪ್ರದಾಯಕ' ಎಂದು ಬಣ್ಣಿಸಿದ್ದಾರೆ.
ಬ್ರಿಟನ್ ಜೊತೆಗಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಭಾರತವು ಹೆಚ್ಚಿನ ಆದ್ಯತೆಯನ್ನು ಕಲ್ಪಿಸುತ್ತದೆ. ಮುಂಬರುವ ವರ್ಷಗಳಲ್ಲಿ ತಂತ್ರಜ್ಞಾನ, ಹಸಿರು ಇಂಧನ, ಭದ್ರತೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಿಕಟವಾಗಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ವಾಣಿಜ್ಯ ಜತೆಗೆ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ.
ಈ ನಡುವೆ ಜಿ20 ಶೃಂಗಸಭೆ ವೇಳೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನೂ ಪ್ರಧಾನಿ ಮೋದಿಯವರು ಭೇಟಿಯಾದರು.
ಭೇಟಿ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ನಮ್ಮ ಮಾತುಕತೆ ರಕ್ಷಣೆ, ಭದ್ರತೆ, ವ್ಯಾಪಾರ ಮತ್ತು ತಂತ್ರಜ್ಞಾನದಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವುದರತ್ತ ಕೇಂದ್ರೀಕೃತವಾಗಿದೆ. ಸಂಸ್ಕೃತಿ, ಶಿಕ್ಷಣ ಹಾಗೂ ಇತರೆ ಕ್ಷೇತ್ರಗಳಲ್ಲೂ ಸಹಕಾರ ವೃದ್ಧಿಸುವ ಕುರಿತು ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಶೃಂಗಸಭೆ ವೇಳೆ ಮೋದಿಯವರು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್, ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್, ಅಮೆರಿಕದ ಅಧ್ಯಕ್ಷ ಜೋ ಬೈಡನ್, ಸ್ಪೇನ್‌ನ ಅಧ್ಯಕ್ಷ ಪೆಡ್ರೊ ಸಂಖೇಜ್, ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೊಲ್ ಸೇರಿದಂತೆ ಇನ್ನಿತರ ಜಾಗತಿಕ ನಾಯಕರನ್ನು ಭೇಟಿಯಾದರು.
Advertisement