ಮುಂಬೈ: ಮಹಾರಾಷ್ಟ್ರದಲ್ಲಿ ಬಿಟ್‌ಕಾಯಿನ್ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವ್ ಮೆಹ್ತಾ ಅವರ ಛತ್ತೀಸ್‌ಗಢದ ನಿವಾಸ ಹಾಗೂ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯ ಬುಧವಾರ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಇಡಿ ದಾಳಿ ನಡೆಸಿದೆ.
ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿರುವ ಮೆಹ್ತಾ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎನ್‌ಸಿಪಿ ನಾಯಕಿ ಮತ್ತು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಮತ್ತು ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವರು ಪ್ರಸಕ್ತ ಚುನಾವಣೆಗೆ ಹಣ ನೀಡಲು ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ಬಳಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಸುಳೆ ಆರೋಪವನ್ನು ನಿರಾಕರಿಸಿದ್ದಾರೆ.
ಮೆಹ್ತಾ ಅವರು ಈ ಬಿಟ್ ಕಾಯಿನ್ ವಹಿವಾಟುಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಬುಧವಾರ ಮತದಾನ ನಡೆಯುತ್ತಿದೆ.
ತಿಂಗಳಿಗೆ 10 ಪರ್ಸೆಂಟ್ ರಿಟರ್ನ್ ನೀಡುವುದಾಗಿ ಸುಳ್ಳು ಭರವಸೆ ನೀಡಿ ಸಾರ್ವಜನಿಕರಿಂದ ಬಿಟ್‌ಕಾಯಿನ್‌ಗಳ ರೂಪದಲ್ಲಿ(2017 ರಲ್ಲಿ ರೂ 6,600 ಕೋಟಿ ಮೌಲ್ಯದ) ಬೃಹತ್ ಮೊತ್ತದ ಹಣವನ್ನು ಸಂಗ್ರಹಿಸಿರುವ ಆರೋಪದ ಮೇಲೆ ಮೆಹ್ತಾ ಮತ್ತು ಇತರ ಕೆಲವರ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
Advertisement