ಚೆನ್ನೈ: ಚೆನ್ನೈ ಸಮೀಪದ ಚೆಂಗಲ್ಪಟ್ಟು ಜಿಲ್ಲೆಯ ತಿರುಪೋರೂರು ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಮಹಿಳೆಯರು ತಮ್ಮ ಜಾನುವಾರುಗಳನ್ನು ಸಮೀಪದ ಹೊಲಗಳಿಗೆ ಮೇಯಲು ಬಿಟ್ಟು ರಸ್ತೆ ಬದಿಯಲ್ಲಿ ಕುಳಿತಿದ್ದಾಗ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಅವರಿಗೆ ಡಿಕ್ಕಿ ಹೊಡೆದಿದೆ.
ಮೃತರನ್ನು ಎಂ ಆಂಧಾಯಿ(71), ಸಿ ಲೋಗಮ್ಮಳ್(56), ಜಿ ಯಶೋಧ(54), ಎಸ್ ವಿಜಯ(53), ಕೆ ಗೌರಿ(52) ಎಂದು ಗುರುತಿಸಲಾಗಿದೆ.
ಅಪಘಾತದ ವೇಳೆ ನಾಲ್ವರು ಕಾಲೇಜು ವಿದ್ಯಾರ್ಥಿಗಳು ಕಾರಿನಲ್ಲಿದ್ದರು. ಕಾರು ಚಾಲನೆ ಮಾಡುತ್ತಿದ್ದ ಯುವಕ ಸೇರಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸ್ಥಳದಿಂದ ಪರಾರಿಯಾಗಿರುವ ಇತರ ಇಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ.
ಅಪಘಾತ ಸಂಭವಿಸಿದ ನಂತರ ಸಮೀಪದ ಗ್ರಾಮಸ್ಥರು ಈ ಇಬ್ಬರು ಯುವಕರನ್ನು ಹಿಡಿದು ಥಳಿಸಿ, ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಇಬ್ಬರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಅವರು ಕುಡಿದಂತೆ ತೋರುತ್ತಿಲ್ಲ. ಆದರೂ ನಾವು ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದೇವೆ.
ಕಾರು ಚಲಾಯಿಸುತ್ತಿದ್ದ ಜೋಶುವಾ(19) ಮತ್ತು ಅಹ್ಮದ್(20) ಎಂಬ ಇಬ್ಬರು ಬಂಧಿತರು ಸೇರಿದಂತೆ ನಾಲ್ವರು ತಿರುಪೋರೂರು ಬಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನ ತಿರುಪೋರೂರಿನಿಂದ ಮಾಮಲ್ಲಪುರಕ್ಕೆ ತೆರಳುತ್ತಿದ್ದರು. ಅವರು ಪಯನೂರು-ಪಂಡಿತಮೇಡು ಜಂಕ್ಷನ್‌ನಲ್ಲಿ ಕಾರು ನಿಯಂತ್ರಣ ತಪ್ಪಿ ಐವರು ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ.
ಚೆಂಗಲ್ಪಟ್ಟು ಜಿಲ್ಲಾ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚೆಂಗಲಪಟ್ಟು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದೇ ವೇಳೆ ಪಯನೂರು ಗ್ರಾಮಸ್ಥರ ಗುಂಪು ಕಾರಿನಲ್ಲಿದ್ದವರ ವಿರುದ್ಧ ಶೀಘ್ರ ಹಾಗೂ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪೊಲೀಸ್ ವಾಹನವನ್ನು ತಡೆದು ಪ್ರತಿಭಟನೆ ನಡೆಸಿದರು. ಅಲ್ಲದೆ ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಪೊಲೀಸರು ಭರವಸೆ ನೀಡಿ ಗುಂಪನ್ನು ಚದುರಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಸಾವಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
Advertisement