ಚಂಡೀಗಢ: ಚುನಾವಣೆಗೂ ಮುನ್ನವೇ ಪಂಜಾಬ್ ನ ಗುರುದಾಸ್‌ಪುರ ಗ್ರಾಮವೊಂದರಲ್ಲಿ ಸರಪಂಚ್ ಸ್ಥಾನಕ್ಕೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸ್ಥಳೀಯ ರಾಜಕಾರಣಿಯೊಬ್ಬರು ಬರೋಬ್ಬರಿ ಎರಡು ಕೋಟಿ ರೂ. ನೀಡಿ ಹುದ್ದೆ ಪಡೆದಿದ್ದು, ಇದಕ್ಕೆ ಹಲವು ರಾಜಕೀಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 15 ರಂದು ಪಂಜಾಬ್ ಗ್ರಾಮ ಪಂಚಾಯತ್ ಚುನಾವಣೆ ನಿಗದಿಯಾಗಿದ್ದು, ಪ್ರಜಾಪ್ರಭುತ್ವದ ನಿಯಮಗಳನ್ನು ಉಲ್ಲಂಘಿಸಿ ಚುನಾವಣೆಗೂ ಮುನ್ನವೇ ಹರ್ದೋವಾಲ್ ಕಲಾನ್ ಗ್ರಾಮದಲ್ಲಿ ವಿವಾದಾತ್ಮಕ ಬಿಡ್ಡಿಂಗ್ ನಡೆದಿದೆ.
50 ಲಕ್ಷಕ್ಕಿಂತ ಕಡಿಮೆ ಬಿಡ್‌ಗಳೊಂದಿಗೆ ಪ್ರಾರಂಭವಾದ ಹರಾಜು ಅಂತಿಮವಾಗಿ 2 ಕೋಟಿಗೆ ತಲುಪಿತು. ಸ್ಥಳೀಯ ಬಿಜೆಪಿ ನಾಯಕ ಆತ್ಮ ಸಿಂಗ್ ಅವರು ಚೆಕ್ ಮೂಲಕ ಎರಡು ಕೋಟಿ ರೂಪಾಯಿ ನೀಡಿ ಹುದ್ದೆ ಪಡೆದಿದ್ದಾರೆ.
ಗ್ರಾಮದ ಅಭಿವೃದ್ಧಿಗೆ ಗರಿಷ್ಠ ಹಣವನ್ನು ನೀಡುವ ಸರಪಂಚರನ್ನು ಆಯ್ಕೆ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಹರಾಜಿನ ಹಣವನ್ನು ಗ್ರಾಮದ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು. ಈ ಹಣದ ಹಂಚಿಕೆಯನ್ನು ಗ್ರಾಮಸ್ಥರನ್ನೊಳಗೊಂಡ ಸಮಿತಿ ನೋಡಿಕೊಳ್ಳುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ. ಗಮನಾರ್ಹ ವಿಚಾರವೆಂದರೆ, ಸಿಂಗ್ ಅವರ ತಂದೆ ಈ ಹಿಂದೆ ಇದೇ ಗ್ರಾಮದ ಸರಪಂಚ್ ಆಗಿ ಸೇವೆ ಸಲ್ಲಿಸಿದ್ದರು.
ಗುರುದಾಸ್‌ಪುರ ಜಿಲ್ಲೆಯ ಅತಿದೊಡ್ಡ ಗ್ರಾಮಗಳಲ್ಲಿ ಒಂದಾದ ಹರ್ದೋವಾಲ್ ಕಲಾನ್ ನಲ್ಲಿ ಮಾತ್ರ ಇಂತಹ ಹರಾಜು ಪ್ರಕ್ರಿಯೆ ನಡೆದಿಲ್ಲ. ಬಟಿಂಡಾದ ಗೆಹ್ರಿ ಬಟ್ಟಾರ್ ಗ್ರಾಮದಲ್ಲೂ ಇದೇ ರೀತಿಯ ಹರಾಜು ಪ್ರಕ್ರಿಯೆ ನಡೆದಿದ್ದು, ಒಬ್ಬ ಆಕಾಂಕ್ಷಿಯು ಸರಪಂಚ್ ಹುದ್ದೆಗೆ 60 ಲಕ್ಷ ರೂ. ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರು ಈ ಹರಾಜು "ಬಹಿರಂಗ ಭ್ರಷ್ಟಾಚಾರ" ಎಂದು ಟೀಕಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
"ಇದು ತಪ್ಪು. 2 ಕೋಟಿ ರೂ.ಗಳನ್ನು ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ವಿಜಿಲೆನ್ಸ್ ಬ್ಯೂರೋಗೆ ಒತ್ತಾಯಿಸುತ್ತೇನೆ" ಎಂದು ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಾಜ್ವಾ ಹೇಳಿದ್ದಾರೆ.
"ಪಂಜಾಬ್‌ನಲ್ಲಿ ಅಕ್ಟೋಬರ್ 15 ರಂದು ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, ನಾಮಪತ್ರಗಳನ್ನು ಸಲ್ಲಿಸಲು ಅಕ್ಟೋಬರ್ 4 ಕೊನೆಯ ದಿನಾಂಕವಾಗಿದ್ದು, ಅಕ್ಟೋಬರ್ 5 ರಂದು ನಾಮಪತ್ರಗಳ ಪರಿಶೀಲನೆ ಮತ್ತು ಅಕ್ಟೋಬರ್ 7 ರಂದು ನಾಮಪತ್ರಗಳನ್ನು ಹಿಂಪಡೆಯಲು ಅಂತಿಮ ದಿನಾಂಕವಾಗಿದೆ. ಮತದಾನದ ದಿನವೇ ಮತ ಎಣಿಕೆ ನಡೆಯಲಿದೆ.
Advertisement