ತಿರುಪತಿ: ತಿರುಪತಿ ವೆಂಕಟೇಶ್ವರ ದೇವಾಲಯದ ಪ್ರಸಾದ 'ಲಡ್ಡು'ವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ ವಿಚಾರ ಸುಪ್ರೀಂಕೋರ್ಟ್ ನಲ್ಲಿರುವುದರಿಂದ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT) ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಂಧ್ರ ಪ್ರದೇಶ DGP ಚ ದ್ವಾರಕಾ ತಿರುಮಲ ರಾವ್ ಮಂಗಳವಾರ ಹೇಳಿದರು.
ಕಳೆದ ಎರಡು ದಿನಗಳಲ್ಲಿ ಎಸ್ ಐಟಿ ಸಂಗ್ರಹ ಮತ್ತು ಮಾದರಿ ಪ್ರಕ್ರಿಯೆಗಳನ್ನು ತನಿಖೆ ಮಾಡಿದ್ದು, ಲಡ್ಡುಗಳಲ್ಲಿ ಕಲಬೆರಕೆ ಮಾಡಲು ಹೇಗೆ ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ DGP ಎಸ್ ಐಟಿಯವರು ಮೊದಲಿಗೆ ಲಡ್ಡು ತಯಾರಿಕೆ ಪ್ರಕ್ರಿಯೆ ಅರ್ಥ ಮಾಡಿಕೊಳ್ಳಬೇಕು. ಅದನ್ನು ಅಧ್ಯಯನ ಮಾಡಬೇಕು ಮತ್ತು ಎಲ್ಲಾ ಮಾಹಿತಿ ಪಡೆಯಬೇಕು. ಆದರೆ ಈ ಮಧ್ಯೆ ಸುಪ್ರೀಂ ಕೋರ್ಟ್‌ನಿಂದ ಬಂದ ಆದೇಶಕನ್ನುಗುಣವಾಗಿ ತನಿಖೆ ನಿಲ್ಲಿಸಿದ್ದೇವೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಹೆಚ್ಚು ಮಾತನಾಡುವುದು ಸೂಕ್ತವಲ್ಲ ಎಂದು ಹೇಳಿದರು.
ಸೋಮವಾರ ಲಡ್ಡು ಪ್ರಕರಣ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರ ನೇಮಿಸಿರುವ ಎಸ್‌ಐಟಿಯಿಂದ ತನಿಖೆ ಮುಂದುವರಿಯಬೇಕೇ ಅಥವಾ ಸ್ವತಂತ್ರ ಏಜೆನ್ಸಿಯಿಂದ ತನಿಖೆ ನಡೆಸಬೇಕೆ ಎಂದು ನಿರ್ಧರಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೆರವಾಗುವಂತೆ ಸೂಚಿಸಿ, ಅಕ್ಟೋಬರ್ 3ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿತು.
ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಗುಂಟೂರು ವಲಯದ ಐಜಿಪಿ ನೇತೃತ್ವದಲ್ಲಿ ಒಂಬತ್ತು ಸದಸ್ಯರ ಎಸ್‌ಐಟಿಯನ್ನು ರಚಿಸಿದ್ದಾರೆ. ಕಲಬೆರಕೆ ತುಪ್ಪ ಸರಬರಾಜು ಮಾಡಿದ ಆರೋಪದ ಮೇಲೆ ಎಆರ್ ಡೈರಿ ವಿರುದ್ಧ ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿ TTD ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ SIT ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿತ್ತು.
Advertisement