ಜಮ್ಮು ಮತ್ತು ಕಾಶ್ಮೀರ: ಬಿಜೆಪಿ ಅಭ್ಯರ್ಥಿ ಮುಷ್ತಾಕ್ ಅಹ್ಮದ್ ಬುಖಾರಿ ಹೃದಯಾಘಾತದಿಂದ ನಿಧನ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸುರನ್‌ಕೋಟೆಯಿಂದ ಎರಡು ಬಾರಿ ಶಾಸಕರಾಗಿದ್ದ ಮತ್ತು ಇದೇ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ಶಾಸಕ ಮುಷ್ತಾಕ್ ಅಹ್ಮದ್ ಶಾ ಬುಖಾರಿ ಅವರು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮುಷ್ತಾಕ್ ಅಹ್ಮದ್ ಬುಖಾರಿ ಅವರು ಇಂದು ಪೂಂಚ್ ಜಿಲ್ಲೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಬುಖಾರಿ ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಬಿಜೆಪಿ ನಾಯಕರ ಪ್ರಕಾರ, ಬುಖಾರಿ ಅವರು ಕೆಲವು ಸಮಯದಿಂದ ಅಸ್ವಸ್ಥರಾಗಿದ್ದರು ಮತ್ತು ಇಂದು ಬೆಳಗ್ಗೆ 7 ಗಂಟೆಗೆ ಅವರಿಗೆ ಹೃದಯಾಘಾತವಾಗಿದೆ. ಅವರ ನಿಧನದಿಂದ ಪಕ್ಷ ಮತ್ತು ಸಮುದಾಯಕ್ಕೆ ಗಮನಾರ್ಹ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಬುಖಾರಿ ಅವರು ಕಳೆದ ಫೆಬ್ರವರಿಯಲ್ಲಿ ಬಿಜೆಪಿ ಸೇರಿದ್ದರು ಮತ್ತು ಸುರನ್‌ಕೋಟೆಯಿಂದ ಕೇಸರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಸೆಪ್ಟೆಂಬರ್ 25 ರಂದು ಸುರನ್‌ಕೋಟೆ ಸೇರಿದಂತೆ 25 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.