ಹೈದರಾಬಾದ್: ನಟ ನಾಗಚೈತನ್ಯ ಮತ್ತು ನಟಿ ಸಮಂತಾ ವಿಚ್ಚೇಧನ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ತೆಲಂದಾಣ ಸಚಿವೆ ಕೊಂಡ ಸುರೇಖಾ ಕೊನೆಗೂ ಕ್ಷಮೆಯಾಚಿಸಿದ್ದು, ತಮ್ಮ ಈ ರೀತಿಯ ಹೇಳಿಕೆಗೆ ಮಾಜಿ ಸಚಿವ ಕೆಟಿ ರಾಮಾರಾವ್ ಕಾರಣ ಎಂದು ಆರೋಪಿಸಿದ್ದಾರೆ.
ತೆಲಂಗಾಣ ಮಾಜಿ ಸಚಿವ ಕೆಟಿಆರ್ ನಿಂದಾಗಿಯೇ ನಾಗ ಚೈತನ್ಯ-ಸಮಂತಾ ವಿಚ್ಛೇದನ ಪಡೆದಿದ್ದಾರೆ ಎಂದು ಹೇಳಿಕೆ ನೀಡಿದ್ದ ಸಚಿವೆ ಕೊಂಡ ಸುರೇಖಾ, ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ನಟಿ ಸಮಂತಾ ಅವರಿಗೆ ಕ್ಷಮೆಯಾಚಿಸಿದ್ದಾರೆ.
ಮಾಜಿ ಸಚಿವ ಹಾಗೂ ಬಿಆರ್ ಎಸ್ ಪಕ್ಷದ ಕೆಟಿ ರಾಮಾರಾವ್ ಅವರನ್ನು ಟೀಕಿಸುವ ಭರದಲ್ಲಿ ಟಾಲಿವುಡ್ ಇಂಡಸ್ಟ್ರಿ ಹಾಗೂ ನಟಿ ಸಮಂತಾ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಅವಹೇಳನ ಆರೋಪಗಳನ್ನು ಕೊಂಡ ಸುರೇಖಾ ಮಾಡಿದ್ದರು. ಅವರ ಈ ಹೇಳಿಕೆಗೆ ಇಡೀ ಟಾಲಿವುಡ್ ತಾರೆಯರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಸಿನಿಮಾ ಮಂದಿ ಎಂಬ ಕಾರಣಕ್ಕೆ ಚಿತ್ರರಂಗ ಮತ್ತು ವೈಯಕ್ತಿಕ ಬದುಕನ್ನು ರಾಜಕೀಯಕ್ಕೆ ಎಳೆದು ತರಬಾರದು ಎಂದು ಕಿಡಿಕಾರಿದ್ದರು.
ಕೆಟಿಆರ್ ಕಾರಣ
ಈ ಬೆಳವಣಿಗೆ ಬೆನ್ನಲ್ಲೇ ನಟಿ ಸಮಂತಾಗೆ ಸಚಿವೆ ಕೊಂಡ ಸುರೇಖಾ ಕ್ಷಮೆಯಾಚಿಸಿದ್ದು, ಮಾತ್ರವಲ್ಲದೇ ತಮ್ಮ ಈ ಹೇಳಿಕೆಗೆ ಮಾಜಿ ಸಚಿವ ಕೆಟಿರಾಮಾರಾವ್ ಕಾರಣ ಎಂದು ಹೇಳಿದ್ದಾರೆ. 'ಕೆಟಿಆರ್ ನನ್ನನ್ನು ಕೆರಳುವಂತೆ ಮಾತನಾಡಿದ್ದಾರೆ. ಅವರ ಮೇಲಿನ ಕೋಪ ಮತ್ತು ಆಕ್ರೋಶದಿಂದ ನಾನು ಮಾತನಾಡಿದ್ದೆ. ಸಮಂತಾ ಕುರಿತ ನನ್ನ ಹೇಳಿಕೆಗಳನ್ನು ನಾನು ವಾಪಸ್ ಪಡೆಯುತ್ತೇನೆ. ಆದರೆ ಕೆಟಿಆರ್ ವಿರುದ್ಧದ ನನ್ನ ಟೀಕೆಗಳನ್ನು ನಾನು ವಾಪಸ್ ಪಡೆಯುವುದಿಲ್ಲ. ಅವರು ಮಾನನಷ್ಟ ಮೊಕದ್ದಮೆ ಹೂಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.
ನನಗೆ ಆಗಿರುವ ಅವಮಾನ ಬೇರೆಯವರಿಗೆ ಆಗಬಾರದು ಎಂಬ ಕಾರಣಕ್ಕೆ ನಾನು ನನ್ನ ಹೇಳಿಕೆಗಳನ್ನು ವಾಪಸ್ ಪಡೆಯುತ್ತಿದ್ದೇನೆ. ಸಮಂತಾ ವಿಚ್ಛೇದನಕ್ಕೆ ಸಂಬಂಧಿಸಿದಂತೆ ನಾನು ಮಾಡಿದ್ದ ಕಾಮೆಂಟ್‌ಗಳನ್ನು ಹಿಂಪಡೆದು ಟ್ವೀಟ್ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಏನು ಹೇಳಿದ್ದರು ಕೊಂಡ ಸುರೇಖಾ?
ಕೆಟಿಆರ್ ತೆಲಂಗಾಣ ಮಹಿಳೆಯರನ್ನು ಅಪಮಾನಿಸಿದ್ದಾರೆ. ಬಿ.ಸಿ. ಮಹಿಳೆ ಎಂದು ಅಶ್ಲೀಲ ಪೋಸ್ಟ್ ಹಾಕಿರುವುದು ನೋವಿನ ಸಂಗತಿ. ಮಹಿಳೆಯರನ್ನು ಅವಮಾನಿಸುವ ಪೋಸ್ಟ್ ಗಳನ್ನು ಹಾಕುವಂತೆ ಪಕ್ಷದ ಕಾರ್ಯಕರ್ತರಿಗೆ ಕೆಟಿಆರ್ ಹೇಳಿದ್ದರು ಎಂದು ಕೊಂಡ ಸುರೇಖಾ ಹೇಳಿದ್ದರು. ಅಲ್ಲದೆ ಕೆಟಿಆರ್ ವರ್ತನೆಯಿಂದ ಚಿತ್ರರಂಗದ ಹಲವರಿಗೆ ತೊಂದರೆಯಾಗಿದೆ.
ಕೆಲ ಹೀರೋಯಿನ್ ಗಳು ಬೇಗ ಮದುವೆಯಾಗಿ ಸಿನಿಮಾ ಕ್ಷೇತ್ರದಿಂದ ಹಿಂದೆ ಸರಿಯಲು ಕೆಟಿಆರ್ ಕಾರಣ. ಮೇಲಾಗಿ ನಾಗಾರ್ಜುನ ಕುಟುಂಬದ ಪರಿಸ್ಥಿತಿಗೆ ಕೆಟಿಆರ್ ಕಾರಣ. ಸಮಂತಾರನ್ನು ದೈಹಿಕವಾಗಿ ಬಳಸಿಕೊಳ್ಳಲು ಮುಂದಾಗಿದ್ದರು. ಇದಕ್ಕೆ ನಾಗಾರ್ಜುನ ಮತ್ತು ನಾಗಚೈತನ್ಯ ಸಮಂತಾರನ್ನು ಬಲವಂತ ಮಾಡಿದ್ದರು. ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಗೆ ವಿಚ್ಛೇದನ ನೀಡಿದರು ಎಂದು ಹೇಳಿದ್ದರು.
Advertisement