
ಭೋಪಾಲ್: ದೇಶದಲ್ಲಿ ದಿನೇ ದಿನೇ ಡ್ರಗ್ಸ್ ಜಾಲ ಪತ್ತೆ ಹೆಚ್ಚಾಗುತ್ತಿದ್ದು, ಇದೀಗ ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಅಧಿಕಾರಿಗಳು ಕಾರ್ಖಾನೆಯೊಂದರಿಂದ ಬರೊಬ್ಬರಿ 1800 ಕೋಟಿ ರೂ ಮೌಲ್ಯದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಎಟಿಎಸ್ ಗುಜರಾತ್ ಮತ್ತು ಎನ್‌ಸಿಬಿ ಅಧಿಕಾರಿಗಳು ಈ ಬೃಹತ್ ದಾಳಿ ನಡೆಸಿದ್ದು, ಈ ವೇಳೆ ಭೋಪಾಲ್ ಬಳಿಯ ಕಾರ್ಖಾನೆಯಲ್ಲಿದ್ದ ಸುಮಾರು 1800 ಕೋಟಿ ರೂ ಮೌಲ್ಯದ ಡ್ರಗ್ಸ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅಲ್ಲದೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ವಶಕ್ಕೆ ಪಡೆದ ಡ್ರಗ್ಸ್ ಎಂಡಿ ಎಂಬ ಮಾದಕವಸ್ತುವಾಗಿದ್ದು, ಇದೇ ಕಾರ್ಖಾನೆಯಲ್ಲಿ ಈ ಮಾದಕವಸ್ತುಗಳನ್ನು ತಯಾರಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಇದಕ್ಕೂ ಮುನ್ನ ಪಂಜಾಬ್‌ನಿಂದ 10 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುಬೈ ಮತ್ತು ಬ್ರಿಟನ್ ನಲ್ಲಿ ದೊಡ್ಡ ಪ್ರಮಾಣದ ಸರಕುಗಳನ್ನು ಸರಬರಾಜು ಮಾಡುವ ಗುರಿಯನ್ನು ಈ ಸಿಂಡಿಕೇಟ್ ಹೊಂದಿತ್ತು ಎನ್ನಲಾಗಿದೆ.
5,600 ಕೋಟಿ ಡ್ರಗ್ಸ್ ಪ್ರಕರಣದ ಮಾಸ್ಟರ್ ಮೈಂಡ್ ವಿರುದ್ಧ ಲುಕ್ ಔಟ್ ನೋಟಿಸ್
ಏತನ್ಮಧ್ಯೆ ದೆಹಲಿಯಲ್ಲಿ ಪತ್ತೆಯಾಗಿದ್ದ 5600 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಸ್ಟರ್ ಮೈಂಡ್ ವೀರೇಂದ್ರ ಬಸೋಯಾ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಬಸೋಯ ವಿದೇಶದಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದು, ಇತ್ತೀಚೆಗೆ, ದೆಹಲಿ ಪೊಲೀಸರು ಮಹಿಪಾಲ್‌ಪುರದಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣೆ ಗ್ಯಾಂಗ್ ಅನ್ನು ಭೇದಿಸಿದ್ದರು ಮತ್ತು 562 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದರು.
Advertisement