
ಮುಂಬೈ: ಖ್ಯಾತ ಉದ್ಯಮಿ, ಟಾಟಾ ಗ್ರೂಪ್‌ನ ಎಮೆರಿಟಸ್ ಅಧ್ಯಕ್ಷ ರತನ್ ಟಾಟಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
86 ವರ್ಷದ ರತನ್ ಟಾಟಾ ಅವರು ಲೈಫ್ ಸಪೋರ್ಟ್ ನಲ್ಲಿದ್ದಾರೆ ಎನ್ನಲಾಗಿದೆ. ರತನ್ ಟಾಟಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಟಾಟಾ ಗ್ರೂಪ್ ನ ಪ್ರಧಾನ ಕಛೇರಿ ಬಾಂಬೆ ಹೌಸ್ ಖಚಿತಪಡಿಸಿದೆ.
"ಟಾಟಾ ಕುಟುಂಬಕ್ಕೆ ಹತ್ತಿರವಿರುವ ಅವರಲ್ಲಿ ಒಬ್ಬರು ಮತ್ತು ಅವರ ವೈದ್ಯಕೀಯ ಸ್ಥಿತಿಯ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳು ಅವರ ಅನಾರೋಗ್ಯದ ಸ್ವರೂಪದ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ" ಎಂದು ರಾಯಿಟರ್ಸ್ ವರದಿ ಮಾಡಿದೆ.
ಎರಡು ದಿನಗಳ ಹಿಂದೆ, ತಮ್ಮ ಅನಾರೋಗ್ಯದ ವದಂತಿಗಳನ್ನು ತಳ್ಳಿಹಾಕಿದ್ದ ರತನ್ ಟಾಟಾ ಅವರು, ಚಿಂತಿಸಬೇಡಿ, ನಾನು ಚೆನ್ನಾಗಿದ್ದೇನೆ. ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ವಯಸ್ಸಿಗೆ ಸಂಬಂಧಿಸಿದ ವೈದ್ಯಕೀಯ ತಪಾಸಣೆಗೆ ಒಳಗಾಗಿರುವುದಾಗಿ" ಎಂದು ಅವರು ಸಹಿ ಮಾಡಿದ ಸಂದೇಶವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿತ್ತು.
ರತನ್ ಟಾಟಾ ಅವರು 2012 ರವರೆಗೆ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ಅಂತಿಮವಾಗಿ 22 ವರ್ಷಗಳ ನಂತರ ತಮ್ಮ 78 ನೇ ವಯಸ್ಸಿನಲ್ಲಿ ಟಾಟಾ ಗ್ರೂಪ್ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದರು.
ರತನ್ ಟಾಟಾ ಅವರ ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್ ಜಾಗತಿಕವಾಗಿ ವಿಸ್ತರಿಸಿತು. ಟೆಟ್ಲಿ, ಕೋರಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್‌ನಂತಹ ಪ್ರಮುಖ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿತು. ಬಹುಮಟ್ಟಿಗೆ ದೇಶೀಯ ಸಂಸ್ಥೆಯಿಂದ ಜಾಗತಿಕ ಶಕ್ತಿಶಾಲಿಯಾಗಿ ಟಾಟಾ ಬೆಳೆಯಿತು.
Advertisement