ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ರಾಯಭಾರಿಗಳ ವಿರುದ್ಧ ಪ್ರಕರಣ ದಾಖಲಿಸುವ ಕೆನಡಾ ಸರ್ಕಾರದ ನಡೆಗೆ ಭಾರತ ದಿಟ್ಟ ನಿರ್ಧಾರ ಕೈಗೊಂಡಿದ್ದು 6 ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿದೆ. ಅಷ್ಟೇ ಅಲ್ಲ, ಅಕ್ಟೋಬರ್ 19ರ ಮಧ್ಯರಾತ್ರಿ 12 ಗಂಟೆಯೊಳಗೆ ಅಥವಾ ಅದಕ್ಕೂ ಮೊದಲು ಭಾರತವನ್ನು ತೊರೆಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಹಂಗಾಮಿ ಹೈ ಕಮಿಷನರ್ ಸ್ಟೀವರ್ಟ್ ರಾಸ್ ವೀಲರ್, ಡೆಪ್ಯುಟಿ ಹೈ ಕಮಿಷನರ್ ಪ್ಯಾಟ್ರಿಕ್ ಹೆಬರ್ಟ್, ಫಸ್ಟ್ ಸೆಕ್ರೆಟರಿ ಮೇರಿ ಕ್ಯಾಥರೀನ್ ಜೊಲ್ಲಿ, ಲ್ಯಾನ್ ರಾಸ್ ಡೇವಿಡ್ ಟ್ರಿಟ್ಸ್, ಆಡಮ್ ಜೇಮ್ಸ್ ಚುಪ್ಕಾ ಮತ್ತು ಪೌಲಾ ಓರ್ಜುಯೆಲಾ ಭಾರತವನ್ನು ತೊರೆಯುವಂತೆ ಖಡಕ್ ಸೂಚನೆ ನೀಡಲಾಗಿದೆ.
ರಾಜತಾಂತ್ರಿಕರನ್ನು ಹೊರಹಾಕುವ ಸ್ವಲ್ಪ ಸಮಯದ ಮೊದಲು, ವಿದೇಶಾಂಗ ಸಚಿವಾಲಯವು ಹಂಗಾಮಿ ಹೈ ಕಮಿಷನರ್ ಸ್ಟೀವರ್ಟ್ ರಾಸ್ ವೀಲರ್ ಅವರನ್ನು ಕರೆದು ಕೆನಡಾ ಸರ್ಕಾರದ ಇತ್ತೀಚಿನ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ವೀಲರ್ ಅವರು ಭಾರತ ಸರ್ಕಾರಕ್ಕೆ ತಮ್ಮ ಪರವಾಗಿ ಸಾಕ್ಷ್ಯವನ್ನು ಪ್ರಸ್ತುತಪಡಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಕೆಲವೇ ಗಂಟೆಗಳ ನಂತರ, ಎಲ್ಲಾ ರಾಜತಾಂತ್ರಿಕರನ್ನು ಉಚ್ಚಾಟಿಸಲು ಆದೇಶವನ್ನು ನೀಡಲಾಗಿದೆ.
ಕೆನಡಾದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ತನಿಖೆಯಲ್ಲಿ ಕೆನಡಾದ ಸರ್ಕಾರವು ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರನ್ನು 'ಆಸಕ್ತಿಯ ವ್ಯಕ್ತಿ' ಎಂದು ಹೆಸರಿಸಿತ್ತು. ವಾಸ್ತವವಾಗಿ, ಆಸಕ್ತಿಯ ವ್ಯಕ್ತಿ ಎಂದರೆ ಅಪರಾಧದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ನಂಬುವ ವ್ಯಕ್ತಿ, ಆದರೆ ಬಂಧಿಸಿರಲಿಲ್ಲ.
ಇದರ ನಂತರ, ಭಾರತ ಸರ್ಕಾರ ಈ ಬಗ್ಗೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಅಲ್ಲದೆ ಕೆನಡಾ ಸರ್ಕಾರವು ತನ್ನ ಅಧಿಕಾರಿಗಳನ್ನು ಪೂರಕ ಸಾಕ್ಷ್ಯಗಳಿಲ್ಲದೆ ಮಾನಹಾನಿ ಮಾಡುವಂತಿಲ್ಲ ಎಂದು ಹೇಳಿತ್ತು. ಇದಲ್ಲದೆ, ಕೆನಡಾ ತನ್ನ ನೆಲದಲ್ಲಿ ಖಲಿಸ್ತಾನಿ ಉಗ್ರವಾದವನ್ನು ನಿಗ್ರಹಿಸುವಲ್ಲಿ ವಿಫಲತೆಯನ್ನು ಸಮರ್ಥಿಸಲು ಸುಳ್ಳು ಹೇಳಿಕೆಗಳನ್ನು ಬಳಸಿಕೊಂಡು ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಭಾರತ ಸರ್ಕಾರ ಹೇಳಿತ್ತು. ಜೂನ್ 2023ರಲ್ಲಿ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತವು ಭಾಗಿಯಾಗಿದೆ ಎಂದು ಆರೋಪಿಸಿದ್ದರು.
ಈ ಹಿಂದೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೆನಡಾದಿಂದ ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ವಾಪಸ್ ಕರೆಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿರುವ ಹೇಳಿಕೆಯಲ್ಲಿ ಕೆನಡಾದಲ್ಲಿರುವ ಭಾರತೀಯ ರಾಯಭಾರಿಗಳ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಉಗ್ರವಾದ ಮತ್ತು ಹಿಂಸಾಚಾರದ ವಾತಾವರಣದಲ್ಲಿ ಟ್ರುಡೊ ಸರ್ಕಾರದ ಕ್ರಮಗಳು ಅವರ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಸ್ತುತ ಕೆನಡಾ ಸರ್ಕಾರದ ಬದ್ಧತೆಯ ಬಗ್ಗೆ ನಮಗೆ ವಿಶ್ವಾಸವಿಲ್ಲ ಎಂದು ಹೇಳಿತ್ತು.
Advertisement