ಚೆನ್ನೈ: ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಚೆನ್ನೈ ಚೆನ್ನೈ, ತಿರುವಲ್ಲೂರ್, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೇ, ಐಟಿ ಕಂಪನಿಗಳ ನೌಕರರು ಮಂಗಳವಾರದಿಂದ ಶನಿವಾರದರೆಗೂ ಮನೆಯಿಂದಲೇ ಕೆಲಸ ಮಾಡಲು ಸಲಹೆ ಮಾಡುವಂತೆ ಖಾಸಗಿ ಐಟಿ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ.
ಈ ಸಂಬಂಧ ರಾಜ್ಯದಲ್ಲಿನ ಎಲ್ಲಾ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಮಳೆ ಅವಧಿಯಲ್ಲಿ ಮಕ್ಕಳ ಸುರಕ್ಷತೆಗೆ ಖಾತ್ರಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಈ ಕ್ರಮಗಳಲ್ಲಿ ವಿದ್ಯುತ್ ಕೇಬಲ್‌ಗಳ ಮೇಲ್ವಿಚಾರಣೆ, ಒಳಚರಂಡಿ ವ್ಯವಸ್ಥೆ ತೆರವು, ಮರಗಳನ್ನು ಕತ್ತರಿಸುವುದು ಮತ್ತು ಶಾಲೆಯ ಮೇಲ್ಛಾವಣಿಗಳ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳುವುದು ಸೇರಿವೆ. ಶಿಥಿಲಗೊಂಡ ಅಥವಾ ದುರ್ಬಲವಾದ ಕಟ್ಟಡಗಳನ್ನು ಬಳಸದಂತೆ ಶಾಲೆಗಳಿಗೆ ಸೂಚಿಸಲಾಗಿದೆ.
ನೀರು ನಿಲ್ಲುವ ಸ್ಥಳಗಳಲ್ಲಿ ಮಕ್ಕಳನ್ನು ಬಿಡದಂತೆ ಅವರ ಪೋಷಕರಿಗೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ತಿಳಿಸಬೇಕು. ವಿದ್ಯಾರ್ಥಿಗಳು ರೈನ್ ಕೋಟ್, ಛತ್ರಿ ಬಳಸುವಂತೆ ಪ್ರೋತ್ಸಾಹಿಸಬೇಕು. ಅಲ್ಲದೇ ಮಳೆಯಿಂದ ಹಾನಿಗೊಳಗಾದ ಜನರಿಗೆ ವಸತಿ ಕಲ್ಪಿಸಲು ಶಾಲಾ ಆವರಣ ಬಳಸಬೇಕಾದರೆ ಅದರ ಪ್ರಭಾರ ಸಿಬ್ಬಂದಿ ವಿವರಗಳನ್ನು ಕಂದಾಯ ಇಲಾಖೆಗೆ ನೀಡಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
Advertisement