ಬಾಲಿವುಡ್ ಸಲ್ಮಾನ್ ಖಾನ್ ರನ್ನು ಹತ್ಯೆ ಮಾಡುವುದಾಗಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸವಾಲು ಹಾಕಿದ್ದಾರೆ. ಇದರ ಬೆನ್ನಲ್ಲೇ ಸಲ್ಲು ಬಾಯ್ ಮಾಜಿ ಪ್ರೇಯಸಿ, ಪಾಕಿಸ್ತಾನಿ-ಅಮೆರಿಕನ್ ನಟಿ ಸೋಮಿ ಅಲಿ ಸಾಮಾಜಿಕ ಮಾಧ್ಯಮದಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ಗೆ ಬಹಿರಂಗ ಪತ್ರ ಬರೆದಿದ್ದು ಜೂಮ್ ಕರೆ ಮೂಲಕ ಮಾತನಾಡುವ ಬಯಕೆಯನ್ನು ವ್ಯಕ್ತಪಡಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಪ್ರಸ್ತುತ ಅಮೆರಿಕದಲ್ಲಿ ವಾಸಿಸುತ್ತಿರುವ ಸೋಮಿ, ಸಾಮಾಜಿಕ ಮಾಧ್ಯಮದಲ್ಲಿ ನೇರವಾಗಿ ಲಾರೆನ್ಸ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲಾರೆನ್ಸ್ ಅವರ ಫೋಟೋವನ್ನು ಹಂಚಿಕೊಂಡು, 'ಸಹೋದರ ಲಾರೆನ್ಸ್, ನಾನು ನಿಮ್ಮೊಂದಿಗೆ ಒಂದು ವಿಷಯದ ಬಗ್ಗೆ ಮಾತನಾಡಲು ಬಯಸುತ್ತೇನೆ. ದಯವಿಟ್ಟು ನಾವು ಜೂಮ್ ಕರೆಯಲ್ಲಿ ಹೇಗೆ ಮಾತನಾಡಬಹುದು ಎಂದು ಹೇಳಿ? ಎಂದು ಬರೆದುಕೊಂಡಿದ್ದಾರೆ.
ರಾಜಸ್ಥಾನದ ಬಿಷ್ಣೋಯ್ ಸಮುದಾಯದ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವ ಬಯಕೆಯನ್ನು ವ್ಯಕ್ತಪಡಿಸಿರುವ ಸೋಮಿ, ಲಾರೆನ್ಸ್ ಅವರ ಮೊಬೈಲ್ ಸಂಖ್ಯೆಯನ್ನು ಕೇಳಿದ್ದಾರೆ. ರಾಜಸ್ಥಾನ ನನ್ನ ಅಚ್ಚುಮೆಚ್ಚಿನ ಸ್ಥಳವಾಗಿದೆ. ನಾನು ಅಲ್ಲಿ ಪೂಜೆಗೆ ಬರಲು ಬಯಸುತ್ತೇನೆ. ನಾನು ಮೊದಲು ನಿಮ್ಮೊಂದಿಗೆ ಮಾತನಾಡಿದರೆ ಒಳ್ಳೆಯದು. ನನ್ನನ್ನು ನಂಬಿರಿ, ಅದು ನಿಮ್ಮ ಪ್ರಯೋಜನಕ್ಕಾಗಿ ಎಂದು ಬರೆದಿದ್ದಾರೆ.
ಸೋಮಿ ಅಲಿ 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಅನೇಕ ಚಲನಚಿತ್ರಗಳನ್ನು ಮಾಡಿದ್ದಾರೆ. ಸಲ್ಮಾನ್ ಖಾನ್ ಅವರೊಂದಿಗೆ ಸುಮಾರು 8 ವರ್ಷಗಳ ಕಾಲ (1991-1999) ಸಂಬಂಧದಲ್ಲಿದ್ದರು. ಸಲ್ಮಾನ್ ಮನೆಯ ಹೊರಗೆ ಇತ್ತೀಚೆಗೆ ನಡೆದ ಗುಂಡಿನ ದಾಳಿಯ ನಂತರ, ಸೋಮಿ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಲು ಮುಂದಾಗಿದ್ದರು.
ಸದ್ಯ ಗುಜರಾತ್‌ನ ಸಬರಮತಿ ಸೆಂಟ್ರಲ್ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ಇತ್ತೀಚೆಗಷ್ಟೇ ಆತನ ಗ್ಯಾಂಗ್ ಸಲ್ಮಾನ್ ಆಪ್ತ ಬಾಬಾ ಸಿದ್ದಿಕಿಯನ್ನು ಕೊಂದು ಕೆನಡಾದಲ್ಲಿರುವ ಎಪಿ ಧಿಲ್ಲೋನ್ ಮನೆಯ ಮೇಲೂ ಗುಂಡಿನ ದಾಳಿ ನಡೆಸಿತ್ತು.
ಸೋಮಿಯ ಈ ಮುಕ್ತ ಸಂದೇಶವು ಆಕೆಯ ಹಿಂದಿನ ಮತ್ತು ಲಾರೆನ್ಸ್‌ಗೆ ಸಂಬಂಧಿಸಿದ ವಿವಾದಗಳನ್ನು ಹೆಚ್ಚು ಆಸಕ್ತಿದಾಯಕವಾಗಿಸಿದೆ. ಇದರಿಂದಾಗಿ ಈ ವಿಷಯವು ಇನ್ನಷ್ಟು ಬೆಳಕಿಗೆ ಬಂದಿದೆ.
Advertisement