
ಬಹ್ರೈಚ್: ಉತ್ತರ ಪ್ರದೇಶ ಪೊಲೀಸರು ಗುರುವಾರ ನಡೆಸಿದ ಎನ್ ಕೌಂಟರ್ ನಲ್ಲಿ ಬಹ್ರೈಚ್ ಹಿಂಸಾಚಾರ ಹಿಂಸಾಚಾರ ಪ್ರಕರಣದ ಐವರು ಶಂಕಿತರನ್ನು ಬಂಧಿಸಲಾಗಿದೆ. ಗುಂಡೇಟಿನಿಂದ ಇಬ್ಬರು ಗಾಯಗೊಂಡಿರುವುದಾಗಿ
ಪೊಲೀಸ್ ವರಿಷ್ಠಾಧಿಕಾರಿ ವೃಂದಾ ಶುಕ್ಲಾ ದೃಢಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಅವರಲ್ಲಿ ಇಬ್ಬರು ಪೊಲೀಸ್ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಕೊಲೆಗೆ ಬಳಸಲಾದ ಆಯುಧವನ್ನು ವಶಕ್ಕೆ ಪಡೆಯಲು ನಾನ್ಪಾರಾ ಪ್ರದೇಶಕ್ಕೆ ಪೊಲೀಸರು ತೆರಳಿದಾಗ ಎನ್‌ಕೌಂಟರ್ ಸಂಭವಿಸಿದೆ ಅವರು ತಿಳಿಸಿದರು.
ಪೊಲೀಸರನ್ನು ನೋಡುತ್ತಿದ್ದಂತೆ ಆರೋಪಿಗಳಾದ ಎಂಡಿ ಸರ್ಫರಾಜ್ ಮತ್ತು ಎಂಡಿ ತಾಲಿಬ್ ಲೋಡೆಡ್ ಗನ್ ನಿಂದ ಗುಂಡು ಹಾರಿಸಿದ್ದಾರೆ. ಈ ವೇಳೆ ಪೊಲೀಸರು ಆತ್ಮ ರಕ್ಷಣೆಗಾಗಿ ಪ್ರತಿದಾಳಿ ನಡೆಸಿದಾಗ ಆರೋಪಿಗಳಿಬ್ಬರು ಗಾಯಗೊಂಡಿದ್ದಾರೆ. ಅವರು ಜೀವಂತವಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ ಮೂವರು ಶಂಕಿತರನ್ನು ಸಹ ಬಂಧಿಸಲಾಗಿದೆ. ಅವರೆಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಶುಕ್ಲಾ ಮಾಹಿತಿ ನೀಡಿದರು.
ಗಡಿ ದಾಟಿ ನೇಪಾಳಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಬ್ ಯಶ್ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ,ಸರ್ಕಾರವು ಮೊದಲಿನಿಂದಲೂ ನಕಲಿ ಎನ್‌ಕೌಂಟರ್ ಮಾಡುವ ಮೂಲಕ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಗಲಭೆಯಲ್ಲಿ ಭಾಗಿಯಾದ ಎಲ್ಲರಿಗೂ ಸಮಾನವಾಗಿ ಶಿಕ್ಷೆಯಾಗಬೇಕು ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಹೇಳಿದ್ದಾರೆ.
ಭಾನುವಾರ ಬಹ್ರೈಚ್ ಜಿಲ್ಲೆಯ ಮಹಾರಾಜ್‌ಗಂಜ್‌ನಲ್ಲಿ ದುರ್ಗಾ ವಿಗ್ರಹದ ನಿಮಜ್ಜನ ಮೆರವಣಿಗೆಯ ಸಮಯದಲ್ಲಿ ಧಾರ್ಮಿಕ ಸ್ಥಳವೊಂದರ ಬಗ್ಗೆ ಜೋರಾಗಿ ಸಂಗೀತ ಹಾಕಿದ್ದಕ್ಕೆ ಉಂಟಾದ ಹಿಂಸಾಚಾರದಲ್ಲಿ ಗುಂಡೇಟಿನಿಂದ 22 ವರ್ಷದ ರಾಮ್ ಗೋಪಾಲ್ ಮಿಶ್ರಾ ಮೃತಪಟ್ಟಿದ್ದರು. ಇದರಿಂದ ಉದ್ರಿಕ್ತಗೊಂಡ ಗುಂಪು ಹಲವಾರು ಮನೆಗಳು, ಅಂಗಡಿಗಳು, ಶೋರೂಮ್‌ಗಳು, ಆಸ್ಪತ್ರೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿತ್ತು.
Advertisement