ಪಾಟ್ನಾ: ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಒಡ್ಡಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಗ್ಯಾಂಗ್ ಅನ್ನು 24 ಗಂಟೆಗಳಲ್ಲಿ ಮುಗಿಸುತ್ತೇನೆ ಎಂದು ಸವಾಲು ಹಾಕಿದ್ದ ಸಂಸದ ಪಪ್ಪು ಯಾದವ್ ಇಂದು ದಿಡೀರ್ ಯೂಟರ್ನ್ ಹೊಡೆದಿದ್ದಾರೆ.
ಹೌದು.. ಇತ್ತೀಚೆಗಷ್ಟೇ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯನ್ನು ಗುಜರಾತಿನ ಸಬರಮತಿ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಹತ್ಯಾಕಾಂಡ ನಡೆಸಿದೆ ಎಂಬ ಆರೋಪವಿದೆ.
ಏತನ್ಮಧ್ಯೆ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ನಂತರ ಬಿಹಾರದ ಪುರ್ನಿಯಾ ಕ್ಷೇತ್ರದ ಸಂಸದ ಪಪ್ಪು ಯಾದವ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, 'ತನಗೆ ಅವಕಾಶ ಸಿಕ್ಕರೆ ಕೇವಲ 24 ಗಂಟೆಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಇಡೀ ಗ್ಯಾಂಗ್ ಅನ್ನು ನಾಶಪಡಿಸುತ್ತೇನೆ ಎಂದು ಹೇಳಿದ್ದರು.
ಅಕ್ಟೋಬರ್ 13 ರಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಪಪ್ಪು ಯಾದವ್ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಕುರಿತು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದರು.
'ಒಬ್ಬ ಅಪರಾಧಿ ಜೈಲಿನಲ್ಲಿ ಕುಳಿತು ಜನರಿಗೆ ಸವಾಲು ಹಾಕುತ್ತಿದ್ದಾನೆ. ಆದರೆ ಎಲ್ಲರೂ ಮೂಕ ಪ್ರೇಕ್ಷಕರಾಗಿಯೇ ಉಳಿದಿದ್ದಾರೆ.
ಕೆಲವೊಮ್ಮೆ ಸಿಧು ಮೂಸೆವಾಲಾ ಮತ್ತು ಕೆಲವೊಮ್ಮೆ ಕರ್ಣಿ ಸೇನೆಯ ಮುಖ್ಯಸ್ಥರು ಕೊಲ್ಲಲ್ಪಟ್ಟಿದ್ದಾರೆ. ಈಗ ಒಬ್ಬ ಕೈಗಾರಿಕೋದ್ಯಮಿ ಮತ್ತು ರಾಜಕಾರಣಿ ಬಾಬಾ ಸಿದ್ದಿಕಿ ಕೊಲೆಯಾಗಿದೆ. ಇದಕ್ಕೆ ಅಂತ್ಯ ಹಾಡಬೇಕಿದೆ. ಕಾನೂನು ಅನುಮತಿಸಿದರೆ, ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಸಂಪೂರ್ಣ ಜಾಲವನ್ನು 24 ಗಂಟೆಗಳಲ್ಲಿ ನಾಶಪಡಿಸುತ್ತೇನೆ ಎಂದು ಪಪ್ಪು ಯಾದವ್ ಹೇಳಿದ್ದರು.
ಅವರ ಈ ಹೇಳಿಕೆ ವ್ಯಾಪಕ ವೈರಲ್ ಆಗಿತ್ತು. ಆದರೆ ಇದೀಗ ಪಪ್ಪು ಯಾದವ್ ಉಲ್ಟಾ ಹೊಡೆದಿದ್ದು ಬಿಷ್ಣೋಯ್ ಗ್ಯಾಂಗ್ ಬಗ್ಗೆ ಪ್ರಶ್ನೆ ಕೇಳಬೇಡಿ ಎನ್ನುತ್ತಿದ್ದಾರೆ.
'ಅವರ ಬಗ್ಗೆ ಪ್ರಶ್ನೆ ಕೇಳಬೇಡಿ'
ಇನ್ನು ಕುಖ್ಯಾತ ಗ್ಯಾಂಗ್ ಸ್ಟರ್ ವಿರುದ್ಧ ಮಾತನಾಡಿದ್ದ ಪಪ್ಪು ಯಾದವ್ ಇದೀಗ ಅವರ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು ಪತ್ರಕರ್ತರಿಗೆ ಮನವಿ ಮಾಡಿದ್ದಾರೆ. ಶನಿವಾರ ಪಾಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಲಾರೆನ್ಸ್ ಬಿಷ್ಣೋಯ್ ಅವರ ಬಗ್ಗೆ ಪ್ರಶ್ನೆ ಕೇಳಲು ಬಯಸಿದಾಗ, ಪಪ್ಪು ಯಾದವ್ ಕೋಪಗೊಂಡಿದ್ದಾರೆ. ಅಲ್ಲದೆ ಈ ಎಲ್ಲ ವಿಷಯಗಳನ್ನು ಕೇಳಬೇಡಿ.
ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ನಾನು ನಿಮಗೆ ಮೊದಲೇ ಹೇಳಿದ್ದೆ.. ಅವರ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು.. ಆದರೂ ನೀವು ಕೇಳುತ್ತಿದ್ದೀರಿ. ತುಂಬಾ ಬುದ್ದಿವಂತರಾಗಲು ಯತ್ನಿಸಬೇಡಿ.. ಎಂದು ಪಪ್ಪುಯಾದವ್ ಕೋಪಗೊಂಡು ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.
ಮತ್ತೊಂದೆಡೆ, ಮುಂಬೈ ಪೊಲೀಸರ ಪ್ರಕಾರ, ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಹರಿಯಾಣ ಮತ್ತು ಉತ್ತರ ಪ್ರದೇಶದ ಶೂಟರ್‌ಗಳು ಭಾಗಿಯಾಗಿದ್ದು, ಪೊಲೀಸರು ಇದುವರೆಗೆ 9 ಮಂದಿಯನ್ನು ಬಂಧಿಸಿದ್ದಾರೆ. ಅಂತೆಯೇ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
Advertisement