
ನವದೆಹಲಿ: ವಿಮಾನಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ, ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಈ ಹಿನ್ನೆಲೆಯಲ್ಲಿ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ವಿಸ್ತಾರ UK17 ವಿಮಾನವು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಮಾನವನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಕ್ಟೋಬರ್ 18 ರಂದು (ಶುಕ್ರವಾರ) ದೆಹಲಿಯಿಂದ ಲಂಡನ್‌ಗೆ ತೆರಳುತ್ತಿದ್ದ ವಿಸ್ತಾರ ವಿಮಾನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಹಾಕಲಾಗಿದೆ. ಶಿಷ್ಟಾಚಾರದ ಪ್ರಕಾರ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ, ಪೈಲಟ್‌ಗಳು ವಿಮಾನವನ್ನು ಫ್ರಾಂಕ್‌ಫರ್ಟ್‌ಗೆ ಮಾರ್ಗ ಬದಲಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ ಬೆಂಗಳೂರಿನಿಂದ ಮುಂಬೈಗೆ ಶುಕ್ರವಾರ ತೆರಳಬೇಕಿದ್ದ ಆಕಾಸ ಏರ್‌ನ ಕ್ಯೂಪಿ 1366 (QP 1366) ವಿಮಾನಕ್ಕೂ ಬಾಂಬ್ ಬೆದರಿಕೆ ಬಂದಿತ್ತು. ನಿರ್ಗಮಿಸುವ ಸ್ವಲ್ಪ ಸಮಯದ ಈ ಬೆದರಿಕೆ ಸಂದೇಶ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುರಕ್ಷತೆ ಮತ್ತು ಭದ್ರತಾ ಕಾರ್ಯವಿಧಾನಗಳ ಪ್ರಕಾರ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ತಪಾಸಣೆ ನಡೆಸಲಾಯಿತು ಎಂದು ಅಕಾಸ ಏರ್ ಎಕ್ಸ್‌ನಲ್ಲಿ ತಿಳಿಸಿದೆ.
ಕಳೆದ ಕೆಲವು ದಿನಗಳಲ್ಲಿ ಭಾರತದ ಸುಮಾರು 40 ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿದ್ದು, ಇದು ಆತಂಕವನ್ನು ಹೆಚ್ಚು ಮಾಡಿದೆ.
ಈ ನಡುವೆ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆಗಳ ಘಟನೆಗಳನ್ನು ತಡೆಗಟ್ಟಲು ಕಠಿಣ ನಿಯಮಗಳನ್ನು ಜಾರಿಗೆ ತರಲು ನಾಗರಿಕ ವಿಮಾನಯಾನ ಸಚಿವಾಲಯ ಯೋಜನೆ ರೂಪಿಸಿದೆ.
ಕಠಿಣ ಕ್ರಮವನ್ನು ಖಚಿತಪಡಿಸಿಕೊಳ್ಳಲು ನಿಯಮಗಳನ್ನು ತಿದ್ದುಪಡಿ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ಈ ವಾರ ಅನೇಕ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳನ್ನು ನೀಡಿದ ಸುಮಾರು 10 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸೈಬರ್ ಭದ್ರತಾ ಸಂಸ್ಥೆಗಳು ಗುರುತಿಸಿ ಬ್ಲಾಕ್ ಮಾಡಿವೆʼʼ ಎಂದು ಮೂಲಗಳು ತಿಳಿಸಿವೆ.
Advertisement