ದೆಹಲಿ CRPF ಶಾಲೆ ಬಳಿ ಭಾರೀ ಸ್ಫೋಟ: ಸ್ಥಳಕ್ಕೆ ಅಧಿಕಾರಿಗಳ ದೌಡು, ಪರಿಶೀಲನೆ ವೇಳೆ ಅನುಮಾನಾಸ್ಪದ ವೈಟ್ ಪೌಡರ್ ಪತ್ತೆ
ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶಾಲೆಯ ಸಮೀಪ ಭಾನುವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ಶಾಲೆಯ ಗೋಡೆಗೆ ಹಾನಿಯಾಗಿದೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಸ್ಫೋಟ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ರೋಹಿಣಿಯ ಸೆಕ್ಟರ್ 14 ರ ಸಿಆರ್‌ಪಿಎಫ್ ಶಾಲೆಯ ಹೊರ ಗೋಡೆಯ ಬಳಿ ಬೆಳಿಗ್ಗೆ 7.50ರ ಸುಮಾರಿಗೆ ಸ್ಫೋಟ ಸಂಭವಿಸಿತ್ತು. ಕೂಡಸೇ 2 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿತು.
ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದು, ಪರಿಶೀಲನೆ ವೇಳೆ ವೈಟ್ ಪೌಡರ್ ಪತ್ತೆಯಾಗಿದ್ದು, ಇದು ಅನುಮಾನಗಳು ಹೆಚ್ಚಾಗುವಂತೆ ಮಾಡಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ದಟ್ಟ ಹೊಗೆ ಆವರಿಸಿತ್ತು. ಸ್ಫೋಟದ ತೀವ್ರತೆಗೆ ಸಮೀಪದ ಅಂಗಡಿಯ ಗಾಜುಗಳು ಹಾಗೂ ಅಂಗಡಿ ಬಳಿ ನಿಲ್ಲಿಸಿದ್ದ ಕಾರಿನ ಗಾಜುಗಳು ಹಾನಿಗೊಳಗಾಗಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಡಿಸಿಪಿ (ರೋಹಿಣಿ) ಅಮಿತ್ ಗೋಯೆಲ್ ಅವರು ತಿಳಿಸಿದ್ದಾರೆ.
ಏತನ್ಮಧ್ಯೆ ಸ್ಥಳದಲ್ಲಿ ಪರಿಶೀಲನೆ ನಡೆಸಲು ಪರಿಶೀಲಿಸಲು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಂಡ ಭೇಟಿ ನೀಡಿದ್ದು, ಬಾಂಬ್ ನಿಷ್ಕ್ರಿಯ ದಳದ ಮತ್ತೊಂದು ತಂಡ ಕೂಡ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ನಡುವೆ ಸಿಆರ್‌ಪಿಎಫ್ ಶಾಲೆಯ ಹೊರಗಿನ ಪ್ರದೇಶವನ್ನು ತಪಾಸಣೆ ನಡೆಸುತ್ತಿದ್ದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರಿಗೆ, ಸ್ಥಳದಲ್ಲಿ ಅನುಮಾನಾಸ್ಪದ ಬಿಳಿ ಪುಡಿಯನ್ನು ಪತತೆ ಮಾಡಿದ್ದು, ಅದನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆಂದು ತಿಳಿದುಬಂದಿದೆ. ಇನ್ನು ಸ್ಫೋಟದ ಬಳಿಕ ಸ್ಥಳೀಯರು ಬೆಚ್ಚಿಬಿದ್ದಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.
ನಾವು ಮನೆಯಲ್ಲಿ ಮಲಗಿದ್ದೆವು. ಈ ವೇಳೆ ಭಾರೀ ಸ್ಫೋಟದ ಶಬ್ಧ ಕೇಳಿಸಿದಾಗ ಎಚ್ಚರಗೊಂಡೆವು. ಆರಂಭದಲ್ಲಿ ಕಟ್ಟಡ ಕುಸಿದಿರಬಹುದು ಎಂದೇ ಭಾವಿಸಿದ್ದೆವು. ಆದರೆ, ಹೊರ ಬಂದು ನೋಡಿದಾಗ ದಟ್ಟ ಹೊಗೆ ಆವರಿಸಿರುವುದು ಹಾಗೂ ದುರ್ವಾಸನೆ ಬರುತ್ತಿರುವುದು ತಿಳಿಯಿತು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಹೊಗೆಯು ರಸ್ತೆಯ 200 ಗಿಂತಲೂ ಹೆಚ್ಚು ವರಿಸಿತ್ತು. ರಾಸಾಯನಿಕ ವಾಸನೆ ಕೂಡ ಬರುತ್ತಿತ್ತು ಎಂದು ಮತ್ತೊಬ್ಬ ನಿವಾಸಿ ರಾಕೇಶ್ ಗುಪ್ತಾ ಎಂಬುವವರು ಹೇಳಿದ್ದಾರೆ.
ಏನಾಯಿತು ಎಂಬುದು ಅರಿವಿಗೆ ಬರಲು ನಮಗೆ 30 ನಿಮಿಷ ಸಮಯ ಬೇಕಾಯಿತು. ದಟ್ಟೆ ಹೊಗೆ ಕಡಿಮೆಯಾದ ಬಳಿಕ ಸ್ಫೋಟ ಎಂಬುದು ತಿಳಿಯಿತು. ಸ್ಥಳದಲ್ಲಿ ಹಲವು ವಾಹನಗಳು ಜಖಂಗೊಂಡಿವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ