ನವದೆಹಲಿ: ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹಾಕುವ ದುಷ್ಕರ್ಮಿಗಳು ವಿಮಾನದಲ್ಲಿ ಪ್ರಯಾಣಿಸದಂತೆ ನಿಯಮಗಳಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಸೋಮವಾರ ಹೇಳಿದ್ದಾರೆ. ಅಕ್ಟೋಬರ್ 14 ರಿಂದ ಏಳು ದಿನಗಳಲ್ಲಿ ಸುಮಾರು 100 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಎಲ್ಲಾ ಬೆದರಿಕೆಗಳು ಹುಸಿ ಎಂಬುದು ನಂತರ ದೃಢಪಟ್ಟಿವೆ.
ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯ್ಡು, ನಾಗರಿಕ ವಿಮಾನಯಾನ ಸುರಕ್ಷತೆ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ 1982 ಮತ್ತು ವಾಯುಯಾನ ಭದ್ರತಾ ನಿಯಮಗಳಿಗೆ ತಿದ್ದುಪಡಿ ತರಲು ಯೋಜಿಸಲಾಗಿದೆ. ವಿಮಾನಗಳಿಗೆ ಬಾಂಬ್ ಬೆದರಿಕೆಯ ಪರಿಸ್ಥಿತಿಯ ಕುರಿತು ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ನಾಗರಿಕ ವಿಮಾನಯಾ ಸುರಕ್ಷತೆ ಬ್ಯೂರೋ ನಿರಂತರವಾಗಿ ಸಂಪರ್ಕ ಹೊಂದಿದೆ ಎಂದು ತಿಳಿಸಿದರು.
ಬೆದರಿಕೆಗಳು ಹುಸಿಯಾಗಿದ್ದರೂ, ವಿಮಾನಯಾನ ಇಲಾಖೆ ಮತ್ತು ವಿಮಾನಯಾನ ಸಂಸ್ಥೆಗಳು ಈ ವಿಷಯವನ್ನು ಲಘುವಾಗಿ ಪರಿಗಣಿಸಿಲ್ಲ. ಕಟ್ಟುನಿಟ್ಟಾದ ಶಿಷ್ಟಾಚಾರವನ್ನು ಅನುಸರಿಸುತ್ತಿವೆ. ಇಂತಹ ಬೆದರಿಕೆಗಳು ಬಂದಾಗ ಇದು ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಾಗಿದ್ದು, ಅಂತಾರಾಷ್ಟ್ರೀಯ ಶಿಷ್ಟಾಚಾರವನ್ನು ಅನುಸರಿಸಲಾಗುವುದು ಎಂದರು.
ಕಳೆದ ವಾರ 8 ವಿಮಾನಗಳ ಪ್ರಯಾಣವನ್ನು ಬೇರೆಡೆಗೆ ತಿರುಗಿಸಲಾಗಿತ್ತು. ಪ್ರತಿಯೊಂದು ಬೆದರಿಕೆಯನ್ನು ಪ್ರತ್ಯೇಕವಾಗಿ ನಿರ್ಣಯಿಸಲಾಗುತ್ತದೆ. ನಮ್ಮ ಪ್ರತಿಕ್ರಿಯೆಯು ಸಮರ್ಥ ಮತ್ತು ಕ್ರಿಯಾತ್ಮಕವಾಗಿದೆ. ಸುರಕ್ಷತೆ ಮತ್ತು ಭದ್ರತೆ ವಿಚಾರದಲ್ಲಿ ನಾವು ರಾಜೀ ಮಾಡಿಕೊಳ್ಳುವುದಿಲ್ಲ. ಅವುಗಳಲ್ಲಿ ಬಹುತೇಕ ಹುಸಿ ಬೆದರಿಕೆಯಾಗಿದ್ದರೂ ಅವುಗಳನ್ನು ಲಘುವಾಗಿ ತೆಗೆದುಕೊಂಡಿಲ್ಲ. ಪ್ರಯಾಣಿಕರ ಜೀವ, ಭದ್ರತೆ ಪರಿಸ್ಥಿತಿ ಮತ್ತು ಶಿಷ್ಟಾಚಾರ ಪ್ರಮುಖವಾಗಿದೆ. ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.
ಬೆದರಿಕೆ ಹಿಂದೆ ಸಂಚು ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ತನಿಖೆ ನಡೆಯುತ್ತಿದೆ. ನಿರ್ದಿಷ್ಟವಾದ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ. ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
Advertisement