
ಅಮರಾವತಿ: ತಿರುಪತಿ ಇಸ್ಕಾನ್ ದೇಗುಲಕ್ಕೆ ಸೋಮವಾರ ಮತ್ತೆ ಬಾಂಬ್ ಬೆದರಿಕೆ ಬಂದಿದ್ದು, ಕೇವಲ 3 ದಿನಗಳ ಅಂತರದಲ್ಲಿ 4ನೇ ಬಾರಿಗೆ ಬೆದರಿಕೆ ಇ-ಮೇಲ್ ಬಂದಿದೆ.
ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಮತ್ತೊಂದು ಬಾಂಬ್ ಬೆದರಿಕೆಯೊಂದು ಬಂದಿದ್ದು, ಭಾನುವಾರ (ಅ.27) ತಡರಾತ್ರಿ ಬಾಂಬ್ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನದ ಭದ್ರತೆಯನ್ನು ಹೆಚ್ಚಿಸಲಾಗಿದೆ.
‘ಪಾಕಿಸ್ತಾನದ ಐಎಸ್‌ಐ ಸಂಘಟನೆಯ ಉಗ್ರರು ದೇವಾಲಯವನ್ನು ಸ್ಫೋಟಿಸಲಿದ್ದಾರೆ’ ಎಂದು ಹೇಳುವ ಇಮೇಲ್ ಒಂದು ದೇವಸ್ಥಾನದ ಸಿಬ್ಬಂದಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಬಂದಿರುವ ಮಾಹಿತಿ ಸಿಕ್ಕಿದ ಕೂಡಲೇ ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್) ಮತ್ತು ಶ್ವಾನ ದಳದ ತಂಡಗಳು ದೇವಸ್ಥಾನಕ್ಕೆ ಆಗಮಿಸಿ ದೇವಾಲಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಆದರೆ, ದೇವಸ್ಥಾನದ ಆವರಣದಲ್ಲಿ ಯಾವುದೇ ಸ್ಫೋಟಕ ಸೇರಿದಂತೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಮಾದಕ ವಸ್ತು ಕಳ್ಳಸಾಗಣೆ ಜಾಲದ ಕಿಂಗ್‌ಪಿನ್ ಜಾಫರ್ ಸಾದಿಕ್ ನನ್ನು ತಮಿಳುನಾಡಿನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯದಿಂದ ಬಂಧಿಸಲಾಗಿದೆ ಎಂದು ಬೆದರಿಕೆಯಲ್ಲಿ ಉಲ್ಲೇಖಿಸಲಾಗಿದೆ.
3 ದಿನದಲ್ಲಿ 4ನೇ ಇ-ಮೇಲ್
ಇನ್ನು ಇಸ್ಕಾನ್ ದೇಗುಲಕ್ಕೆ ಬೆದರಿಕೆ ಇ-ಮೇಲ್ ಇದೇ ಮೊದಲೇನಲ್ಲ. ಈ ಹಿಂದೆ 3 ಬಾರಿ ಇಂತಹ ಬೆದರಿಕೆ ಇ-ಮೇಲ್ ಗಳು ಬಂದಿದ್ದು, ಇದು ನಾಲ್ಕನೇ ಬಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 26 ರಂದು, ತಿರುಪತಿಯ ಎರಡು ಪ್ರಮುಖ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು, ತಪಾಸಣೆ ನಡೆಸಿದ ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುಪತಿ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸುಲು ಬೆದರಿಕೆ ಇಮೇಲ್ ಸುದ್ದಿಯನ್ನು ಖಚಿತಪಡಿಸಿದ್ದು, ಕಾರಣರಾದವರನ್ನು ಗುರುತಿಸಲು ಸೂಕ್ತ ಮತ್ತು ಅಗತ್ಯ ಪ್ರಯತ್ನಗಳು ನಡೆಯುತ್ತಿವೆ ಎಂದು ಭರವಸೆ ನೀಡಿದರು. ಇದು ಮತ್ತೊಂದು ಸುಳ್ಳು ಸಂದೇಶ ಎಂದು ಪೊಲೀಸರು ಶಂಕಿಸಿದ್ದಾರೆ.
Advertisement