
ಬಾರ್ಮರ್: ಭಾರತೀಯ ವಾಯುಪಡೆಗೆ ಸೇರಿದ MiG-29 ಯುದ್ದ ವಿಮಾನ ರಾಜಸ್ತಾನದ ಬಾರ್ಮರ್ ನಲ್ಲಿ ಪತನವಾಗಿದ್ದು, ವಿಮಾನದಲ್ಲಿದ್ದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಜಸ್ತಾನದ ಬಾರ್ಮರ್ ನ ಕವಾಸ್‌ನಲ್ಲಿ ಈ ಯುದ್ಧ ವಿಮಾನ ಪತನಗೊಂಡಿದ್ದು, ವಿಮಾನವು ಎಂದಿನಂತೆ ತನ್ನ ದಿನನಿತ್ಯದ ರಾತ್ರಿ ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಗಂಭೀರ ತಾಂತ್ರಿಕ ದೋಷ ಸಂಭವಿಸಿ ವಿಮಾನ ಪತನವಾಗಿದೆ ಎಂದು ವಾಯುಪಡೆಯ ಮೂಲಗಳು ತಿಳಿಸಿವೆ.
ಇನ್ನು ವಿಮಾನದಲ್ಲಿದ್ದ ಪೈಲಟ್ ಎಮರ್ಜೆನ್ಸಿ ಇಜೆಕ್ಷನ್ ಮೂಲಕ ವಿಮಾನದಿಂದ ಹೊರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುರಂತದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ಮಾಹಿತಿ ಇಲ್ಲ. ಪ್ರಕರಣದ ಕುರಿತು ವಾಯುಪಡೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಮುಂದುವರೆದ ರಕ್ಷಣಾ ಕಾರ್ಯಾಚರಣೆ
ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪೈಲಟ್ ಸುರಕ್ಷಿತವಾಗಿದ್ದು, ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿ 400 ಮೀಟರ್ ದೂರ ಇರುವಂತೆ ಜನರಿಗೆ ತಿಳಿಸಲಾಗಿದೆ.
ಗ್ರಾಮಸ್ಥರು ಮಾಹಿತಿ ನೀಡಿದ ನಂತರ ತಂಡವು ಇಲ್ಲಿಗೆ ತಲುಪಿತು. ಯಾವುದೇ ಗ್ರಾಮಸ್ಥರಿಗೆ ಹಾನಿಯಾಗಿಲ್ಲ. ಇದೀಗ ರಾತ್ರಿಯಿಡೀ ರಕ್ಷಣಾ ಕಾರ್ಯ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿ ಪುಲಿನ್ ಹೇಳಿದರು.
Advertisement