ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಅತ್ಯಾಚಾರ ವಿರೋಧಿ ಮಸೂದೆಯನ್ನು ಅಂಗೀಕರಿಸಿದೆ. ಕೋಲ್ಕತ್ತಾದಲ್ಲಿ ಅರೇ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಘಟನೆಯ ನಂತರ ಮಮತಾ ಸರ್ಕಾರ ವಿಧಾನಸಭೆಯಲ್ಲಿ ಅಪರಾಜಿತಾ ಮಸೂದೆಯನ್ನು ಮಂಡಿಸಿತ್ತು. ಇದಕ್ಕಾಗಿ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿತ್ತು.
ಅಧಿವೇಶನದ ಮೊದಲ ದಿನವಾದ ಇಂದು ಸದನದಲ್ಲಿ ಅತ್ಯಾಚಾರ ವಿರೋಧಿ ಮಸೂದೆಯನ್ನು ಮಂಡಿಸಲಾಯಿತು. ಸರ್ಕಾರವು ಈ ಮಸೂದೆಯನ್ನು ಅಪರಾಜಿತಾ ಮಹಿಳಾ ಮತ್ತು ಮಕ್ಕಳ ಮಸೂದೆ 2024 ಎಂದು ಹೆಸರಿಸಿದೆ. ಈ ಸಂದರ್ಭದಲ್ಲಿ, ಸಿಎಂ ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಬೆಂಬಲಿಸಿ ಹಲವು ಉದಾಹರಣೆಗಳನ್ನು ನೀಡಿದರು.
ವಿಧಾನಸಭೆಯಲ್ಲಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಸಿಎಂ ಮಮತಾ ಬ್ಯಾನರ್ಜಿ ಅವರು 2020ರಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 20 ವರ್ಷದ ದಲಿತ ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕ್ರೂರ ಹತ್ಯೆಯನ್ನು ಪ್ರಸ್ತಾಪಿಸಿದರು. ಅಲ್ಲದೆ ಕಳೆದ ವಾರ ಜೈಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಅತ್ಯಾಚಾರದ ಬಗ್ಗೆ ಪ್ರಸ್ತಾಪಿಸಲಾಗಿದೆ. ಯುಪಿ ಮತ್ತು ಗುಜರಾತ್‌ನಂತಹ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅಪರಾಧದ ಪ್ರಮಾಣವು ಅಸಾಮಾನ್ಯವಾಗಿ ಹೆಚ್ಚಾಗಿದೆ, ಅಲ್ಲಿ ನ್ಯಾಯವಿಲ್ಲ, ಆದರೆ ಬಂಗಾಳದ ಮಹಿಳೆಯರಿಗೆ ನ್ಯಾಯಾಲಯಗಳಲ್ಲಿ ನ್ಯಾಯ ಸಿಗುತ್ತದೆ ಎಂದು ಅವರು ಹೇಳಿದರು.
ಮಸೂದೆ ಮಂಡನೆ ಬಳಿಕ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಮಾತನಾಡಿ, ಈ ಕಾನೂನನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಾವು ಬಯಸುತ್ತೇವೆ. ಅದನ್ನು ಜಾರಿಗೊಳಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ನಾವು ಫಲಿತಾಂಶಗಳನ್ನು ಬಯಸುತ್ತೇವೆ. ಇದು ಸರ್ಕಾರದ ಜವಾಬ್ದಾರಿ. ನಾವು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾವು ಶಾಂತವಾಗಿ ಕೇಳುತ್ತೇವೆ, ಅವರು ಏನು ಬೇಕಾದರೂ ಹೇಳಬಹುದು ಆದರೆ ಈ ಮಸೂದೆಯನ್ನು ತಕ್ಷಣವೇ ಜಾರಿಗೆ ತರುವುದನ್ನು ನೀವು ಖಾತರಿಪಡಿಸಬೇಕು ಎಂದು ಹೇಳಿದರು.
ಅತ್ಯಾಚಾರ ವಿರೋಧಿ ಮಸೂದೆಯಲ್ಲಿನ ಪ್ರಮುಖ ಅಂಶಗಳು
* ಈ ಮಸೂದೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಮಾಡುವ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಅವಕಾಶವಿದೆ.
* ಚಾರ್ಜ್ ಶೀಟ್ ಸಲ್ಲಿಸಿದ 36 ದಿನಗಳಲ್ಲಿ ಮರಣದಂಡನೆಗೆ ಅವಕಾಶ.
* 21 ದಿನಗಳಲ್ಲಿ ತನಿಖೆ ಪೂರ್ಣಗೊಳ್ಳಲಿದೆ.
* ಅಪರಾಧಿಗೆ ಸಹಾಯ ಮಾಡಿದವರಿಗೆ 5 ವರ್ಷಗಳ ಜೈಲು ಶಿಕ್ಷೆಯ ನಿಬಂಧನೆ.
* ಪ್ರತಿ ಜಿಲ್ಲೆಯಲ್ಲಿ ಭಿಕಾರ್ ವಿಶೇಷ ಅಪರಾಜಿತಾ ಕಾರ್ಯಪಡೆ ರಚಿಸಲು ಅವಕಾಶ.
* ಈ ಕಾರ್ಯಪಡೆಯು ಅತ್ಯಾಚಾರ, ಆಸಿಡ್, ದಾಳಿ ಮತ್ತು ಕಿರುಕುಳದಂತಹ ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳುತ್ತದೆ.
* ಆಸಿಡ್ ದಾಳಿಯು ಅತ್ಯಾಚಾರದಂತೆಯೇ ಗಂಭೀರವಾಗಿದೆ. ಅದಕ್ಕೆ ಜೀವಾವಧಿ ಶಿಕ್ಷೆಯ ನಿಬಂಧನೆ ಇದೆ.
* ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವವರ ವಿರುದ್ಧ 3-5 ವರ್ಷಗಳ ಶಿಕ್ಷೆಯ ನಿಬಂಧನೆ.
* ಅತ್ಯಾಚಾರದ ತನಿಖೆ ಮತ್ತು ವಿಚಾರಣೆಯನ್ನು ವೇಗಗೊಳಿಸಲು BNSS ನಿಬಂಧನೆಗಳಲ್ಲಿ ತಿದ್ದುಪಡಿಗಳನ್ನು ಮಸೂದೆ ಒಳಗೊಂಡಿದೆ.
* ಎಲ್ಲಾ ಲೈಂಗಿಕ ಅಪರಾಧಗಳು ಮತ್ತು ಆಸಿಡ್ ದಾಳಿಗಳ ವಿಚಾರಣೆಯನ್ನು 30 ದಿನಗಳಲ್ಲಿ ಪೂರ್ಣಗೊಳಿಸಲು ಅವಕಾಶ.
ಅಪರಾಜಿತಾ ಮಸೂದೆ ಕಾನೂನಾಗುವುದು ಹೇಗೆ?
ಅಪರಾಜಿತಾ ವಿಧೇಯಕವನ್ನು ಅಂಗೀಕರಿಸಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಅನುಮೋದನೆ ಬೇಕಾಗುತ್ತದೆ. ಅಪರಾಜಿತ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದು, ಈಗ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗುವುದು. ಇದಾದ ಬಳಿಕ ರಾಷ್ಟ್ರಪತಿಯಿಂದ ಅನುಮೋದನೆ ಪಡೆಯುವುದು ಅಗತ್ಯ. 294 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್ 223 ಶಾಸಕರ ಬೆಂಬಲವನ್ನು ಹೊಂದಿದೆ. ಆದ್ದರಿಂದ ಈ ಮಸೂದೆಯನ್ನು ಅಂಗೀಕರಿಸುವುದು ಕಷ್ಟವೇನಲ್ಲ. ಆದರೆ, ಈ ಮಸೂದೆಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಒಪ್ಪಿಗೆ ಬೇಕಾಗುತ್ತದೆ. ಇದು ಎಷ್ಟು ಕಷ್ಟಕರವಾಗಿದೆ ಎಂಬುದನ್ನು ತೋರಿಸುವ ಅನೇಕ ಉದಾಹರಣೆಗಳಿವೆ.
ಅತ್ಯಾಚಾರ ವಿರೋಧಿ ಮಸೂದೆಯನ್ನು ಕಾನೂನಾಗಿ ಮಾಡುವುದು ಎಷ್ಟು ಕಷ್ಟ?
2019ರ ಆಂಧ್ರ ಪ್ರದೇಶ ದಿಶಾ ಮಸೂದೆ ಮತ್ತು 2020ರ ಮಹಾರಾಷ್ಟ್ರ ಶಕ್ತಿ ಮಸೂದೆಯಲ್ಲಿ, ಎಲ್ಲಾ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಗೆ ಕೇವಲ ಒಂದು ಶಿಕ್ಷೆಗೆ ಅಂದರೆ ಮರಣದಂಡನೆಗೆ ಅವಕಾಶವಿದೆ. ಎರಡೂ ರಾಜ್ಯಗಳ ವಿಧಾನಸಭೆಗಳಲ್ಲಿ ಅವಿರೋಧವಾಗಿ ಅಂಗೀಕಾರಗೊಂಡಿದ್ದರೂ ಇಲ್ಲಿಯವರೆಗೆ ರಾಷ್ಟ್ರಪತಿಗಳ ಅನುಮೋದನೆ ಸಿಕ್ಕಿಲ್ಲ. ಇದನ್ನು ಕಾನೂನು ಮಾಡುವುದು ಎಷ್ಟು ಕಷ್ಟ ಎಂದು ತೋರಿಸುತ್ತದೆ.
ಅತ್ಯಾಚಾರ ವಿರೋಧಿ ಮಸೂದೆ ಅಪರಾಧವನ್ನು ತಡೆಯುತ್ತದೆಯೇ?
ಮಸೂದೆಯು BNS ಮತ್ತು BNSS ನ ಭಾಗಗಳನ್ನು ಮತ್ತು 2012ರ POCSO ಕಾಯಿದೆಯನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ. ಸಂತ್ರಸ್ತೆಯ ವಯಸ್ಸನ್ನು ಲೆಕ್ಕಿಸದೆ ಹಲವಾರು ರೀತಿಯ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಮರಣದಂಡನೆಯನ್ನು ನೀಡಬಹುದಾಗಿದೆ. ವೈದ್ಯೆ ಹತ್ಯೆಯ ನ್ಯಾಯಕ್ಕಾಗಿ ಕೋಲ್ಕತ್ತಾದಲ್ಲಿ ನಡೆದ ತೀವ್ರ ಪ್ರತಿಭಟನೆಯ ನಂತರ, ಸಿಎಂ ಮಮತಾ ಬ್ಯಾನರ್ಜಿ ಅತ್ಯಾಚಾರ ವಿರೋಧಿ ಮಸೂದೆಯನ್ನು ತರುವುದಾಗಿ ಘೋಷಿಸಿದರು. ಅಸೆಂಬ್ಲಿಯಲ್ಲಿ ಮಂಡಿಸಲಾದ ಈ ಮಸೂದೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳಿಗೆ ಸಂಬಂಧಿಸಿದಂತೆ ಹಲವು ನಿಯಮಗಳಿಗೆ ನಿಬಂಧನೆಗಳಿದ್ದು, ಇಂತಹ ಘಟನೆಗಳನ್ನು ನಿಯಂತ್ರಿಸಬಹುದಾಗಿದೆ.
Advertisement