ಪಾಟ್ನಾ: ಬಿಹಾರದಲ್ಲಿ ಸಾಂಸ್ಕೃತಿಕ ಉತ್ಸವ ವೇಳೆ ಛಾವಣಿ ಕುಸಿದಿದ್ದು, ಅದರ ಮೇಲಿದ್ದ ನೂರಾರು ಮಂದಿ ಗಾಯಗೊಂಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಬಿಹಾರದ ಸರನ್ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಮಹಾವೀರಿ ಮೆರವಣಿಗೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಮಂದಿ ಸೇರಿದ್ದರು.
ಈ ವೇಳೆ ಹಳೆಯ ಕಟ್ಟಡದ ಟೆರೇಸ್ ಕುಸಿದು ಸುಮಾರು 100 ಜನರು ಗಾಯಗೊಂಡಿದ್ದು, ಅವರಲ್ಲಿ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಛಾಪ್ರಾದ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಇಸುವಾಪುರದಲ್ಲಿ ರಾತ್ರಿ 11.15 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೃತ್ಯ ಪ್ರದರ್ಶನ ವೀಕ್ಷಣೆಗೆ ಸೇರಿದ್ದ ಸಾವಿರಾರು ಜನ
ಇನ್ನು ಸಾಂಸ್ಕೃತಿಕ ಉತ್ಸವದಲ್ಲಿ ನೃತ್ಯ ಪ್ರದರ್ಶನ ವೀಕ್ಷಣೆಗೆ ಸಾವಿರಾರು ಜನ ಸೇರಿದ್ದರು. ಮಹಾವೀರಿ ಮೆರವಣಿಗೆ ನಡೆದ ದೇವಸ್ಥಾನದ ಬಳಿ ಹಳೆಯ ಕಟ್ಟಡವಿದ್ದು, ಆ ಕಟ್ಟಡದ ಛಾವಣಿ ಮೇಲೆ ನೂರಾರು ಮಂದಿ ಸೇರಿದ್ದರು. ಈ ವೇಳೆ ಛಾವಣಿ ಅತಿಯಾದ ಭಾರದಿಂದ ಕುಸಿದಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಇಸುವಾಪುರ ಪ್ರಾಥಮಿಕ ಆರೋಗ್ಯ ಸಮುದಾಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಸಣ್ಣಪುಟ್ಟ ಗಾಯಗೊಂಡವರನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ.
ಗಾಯಗೊಂಡವರಲ್ಲಿ 12 ಮಂದಿಯನ್ನು ಇಸುವಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತರರನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ಮಹಾವೀರಿ ಮೆರವಣಿಗೆಯ ಸಂಚಾಲಕ ಶೈಲೇಂದ್ರ ಪ್ರತಾಪ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಇಬ್ಬರು-ಮೂರು ಜನರನ್ನು ಛಾಪ್ರಾದ ಸದರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏತನ್ಮಧ್ಯೆ, ಗಾಯಾಳುಗಳ ಹೇಳಿಕೆ ಮೇರೆಗೆ ಇಸುವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. "ಘಟನೆಯಲ್ಲಿ ಯಾವುದೇ ಸಾವಿನ ವರದಿಯಾಗಿಲ್ಲ" ಎಂದು ಇಸುಪುರ್ ಪೊಲೀಸ್ ಠಾಣೆಯಲ್ಲಿ ಪೋಸ್ಟ್ ಮಾಡಲಾದ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ದೂರವಾಣಿಯಲ್ಲಿ ಈ ಸುದ್ದಿಗಾರರಿಗೆ ತಿಳಿಸಿದರು.
ಮೆರವಣಿಗೆ ಉದ್ದೇಶಕ್ಕಾಗಿ ಅಳವಡಿಸಲಾಗಿದ್ದ ತಾತ್ಕಾಲಿಕ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಈ ಘಟನೆ ನಡೆದಿದೆ ಎಂದು ಸರನ್ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಆಶಿಶ್ ತಿಳಿಸಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ನೂಕುನುಗ್ಗಲು ಉಂಟಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಪ್ರಕ್ರಿಯೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
Advertisement