
ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಎಎಪಿ ನಡುವಿನ ಸೀಟು ಹಂಚಿಕೆ ಮಾತುಕತೆ ಬಹುತೇಕ ವಿಫಲವಾಗಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಹರಿಯಾಣದಲ್ಲಿ 50 ಸ್ಥಾನಗಳಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ನಿರ್ಧರಿಸಿದ್ದು, ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಎಎಪಿ ಮೂಲಗಳು ತಿಳಿಸಿವೆ.
"ಹರಿಯಾಣದಲ್ಲಿ ಮೈತ್ರಿ ಮಾತುಕತೆ ಪತನದ ಅಂಚಿನಲ್ಲಿದೆ ಮತ್ತು ಎಎಪಿ ರಾಜ್ಯದ 90 ವಿಧಾನಸಭಾ ಸ್ಥಾನಗಳಲ್ಲಿ 50 ಸ್ಥಾನಗಳಲ್ಲಿ ಸ್ವಂತವಾಗಿ ಸ್ಪರ್ಧಿಸಲು ಯೋಜಿಸುತ್ತಿದೆ" ಎಂದು ಎಎಪಿ ಮೂಲಗಳು ಹೇಳಿವೆ.
ಹರಿಯಾಣದಲ್ಲಿ ಎಎಪಿ 10 ವಿಧಾನಸಭಾ ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರೆ, ಕಾಂಗ್ರೆಸ್ ಐದರಿಂದ ಏಳು ಸ್ಥಾನಗಳನ್ನು ನೀಡುತ್ತಿದೆ ಎಂದು ಪಕ್ಷದ ಒಳಗಿನವರು ಈ ಹಿಂದೆ ಹೇಳಿದ್ದರು. ಅಲ್ಲದೆ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಎಎಪಿ ಮತ್ತು ಕಾಂಗ್ರೆಸ್ ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಹರಿಯಾಣ, ಗುಜರಾತ್ ಮತ್ತು ದೆಹಲಿಯಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದವು.
ಹರಿಯಾಣದಲ್ಲಿ ಎಎಪಿಗೆ ಕುರುಕ್ಷೇತ್ರ ಲೋಕಸಭಾ ಸ್ಥಾನ ನೀಡಲಾಗಿತ್ತು. ಹರಿಯಾಣ ಎಎಪಿ ರಾಜ್ಯಾಧ್ಯಕ್ಷ ಸುಶೀಲ್ ಗುಪ್ತಾ ಅವರು ಕುರುಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ನವೀನ್ ಜಿಂದಾಲ್ ವಿರುದ್ಧ ಸೋತಿದ್ದರು.
Advertisement