ಭಿವಾನಿ: ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ತಮ್ಮ ಪತಿ ತಲೆಬಾಗುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಶನಿವಾರ ಹೇಳಿದ್ದಾರೆ.
ಹರಿಯಾಣದ ಭಿವಾನಿಯಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಸುನೀತಾ ಕೇಜ್ರಿವಾಲ್, "ಮೋದಿ ಅವರೇ, ನನ್ನ ಪತಿ ಅರವಿಂದ್ ಕೇಜ್ರಿವಾಲ್ ನಿಮ್ಮ ಮುಂದೆ ತಲೆಬಾಗುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ಪತಿ ಭ್ರಷ್ಟನಾಗಿದ್ದರೆ ಈ ಭೂಮಿಯಲ್ಲಿ ಪ್ರಾಮಾಣಿಕ ವ್ಯಕ್ತಿಯೇ ಇಲ್ಲ. ಕೇಜ್ರಿವಾಲ್‌ನಿಂದಾಗಿ ಹರಿಯಾಣದ ಹೆಸರು ಪ್ರಪಂಚದಾದ್ಯಂತ ವೈಭವೀಕರಿಸಲ್ಪಟ್ಟಿದೆ. ಅರವಿಂದ್ ಜನ್ಮಾಷ್ಟಮಿಯಂದು ಜನಿಸಿದ ಕಾರಣ ದೇವರು ಅವರ ಮೂಲಕ ವಿಶೇಷವಾದದ್ದನ್ನು ಮಾಡಲು ಬಯಸುತ್ತಾನೆ ಎಂದು ಅವರು ಹೇಳಿದರು.
ತನ್ನನ್ನು ಹರಿಯಾಣದ ಸೊಸೆ ಮತ್ತು ಮಗಳು ಎಂದು ಕರೆದುಕೊಂಡ ಸುನೀತಾ ಕೇಜ್ರಿವಾಲ್, ನಿಮ್ಮೆಲ್ಲರನ್ನೂ ನೋಡಿ ನನಗೆ ತುಂಬಾ ಶಕ್ತಿ ಬರುತ್ತಿದೆ. ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷಗಳಲ್ಲಿಮಕ್ಕಳ ಶಿಕ್ಷಣ ಸುಧಾರಿಸಿದೆಯೇ? ಸರ್ಕಾರಿ ಶಾಲೆಗಳು ಸುಧಾರಿಸಿವೆಯೇ? ಯಾವುದಾದರೂ ಒಳ್ಳೆಯ ಸರ್ಕಾರಿ ಆಸ್ಪತ್ರೆ ಇದೆಯೇ, ಅಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತದೆಯೇ, ಉಚಿತವಾಗಿ ಔಷಧಗಳು ಲಭ್ಯವಿದೆಯೇ?
ಮನೆಗೆ ದಿನದ 24 ಗಂಟೆಯೂ ವಿದ್ಯುತ್ ಸಿಗುತ್ತಿದ್ದೆಯೇ ಅಥವಾ ಅದು ಉಚಿತವೇ ಎಂದು ಜನರನ್ನು ಪ್ರಶ್ನಿಸಿದರು. ಈ ರೀತಿ ಏನೂ ಆಗಿಲ್ಲ. ಪ್ರತಿಯೊಂದು ಪ್ರದೇಶದಲ್ಲಿ ವಿದ್ಯುತ್, ಅನಿಲ ಮತ್ತು ನೀರಿನ ಕೊರತೆಯಿದೆ. ಈ ಎಲ್ಲಾ ಕೆಲಸಗಳು ದೆಹಲಿ ಮತ್ತು ಪಂಜಾಬ್‌ನಲ್ಲಿ ನಡೆಯುತ್ತಿವೆ. ಈ ಎರಡೂ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವಿದೆ. ಹರಿಯಾಣದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆಗಳು ಉತ್ತಮ ಮತ್ತು ಅತ್ಯುತ್ತಮವಾಗುತ್ತವೆ ಎಂದು ಭರವಸೆ ನೀಡಿದರು.
ದೆಹಲಿ ಮತ್ತು ಪಂಜಾಬಿನಲ್ಲಿ ಮಕ್ಕಳ ಭವಿಷ್ಯ ಉತ್ತಮವಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳು ಅತ್ಯುತ್ತಮವಾಗಿವೆ. ಅಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ವಿವಿಧೆಡೆ ಮೊಹಲ್ಲಾ ಕ್ಲಿನಿಕ್‌ಗಳನ್ನು ನಿರ್ಮಿಸಲಾಗುತ್ತಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಕರ್ಯವಿದೆ. ಪ್ರತಿ ಮಹಿಳೆಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ನೀಡುವ ಯೋಜನೆ ಇದೆ. ನೀವು ಕೂಡಾ ಮೊಹಲ್ಲಾ ಚಿಕಿತ್ಸಾಲಯಗಳಲ್ಲಿ ಉಚಿತ ಮತ್ತು ಉತ್ತಮ ಚಿಕಿತ್ಸೆ ಪಡೆಯುತ್ತೀರಿ. ನಿಮ್ಮ ಮನೆಯಲ್ಲಿಯೂ ಪ್ರತಿ ತಿಂಗಳು ಸುಮಾರು 3,000 ರಿಂದ 4,000 ರೂ. ಉಳಿಸುತ್ತೀರಿ ಎಂದರು.
ಹರಿಯಾಣದ 90 ಸದಸ್ಯ ಬಲದ ವಿಧಾನಸಭೆಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.
Advertisement